ವಿಜಯನಗರ: ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಗೆದ್ದರೆ, ಒಂದು ಮತದಿಂದ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಸೋಲು ಕಂಡಿದ್ದಾರೆ. ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ 57 ಮತಗಳಿಂದ ದಾಖಲೆಯ ಗೆಲುವು ಕಂಡರೆ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಪುತ್ರ ಅಣ್ಣಪ್ಪ ಗೆಲುವು ಸಾಧಿಸಿದರು. ಮಾಜಿ ಸಚಿವ ಆನಂದ್ ಸಿಂಗ್ ಅಳಿಯ ಸಂದೀಪ್ ಸಿಂಗ್ ಕೂಡ ಗೆಲುವಿನ ನಗೆ ಬೀರಿದರು.
ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನದಲ್ಲಿಯೂ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಸೋಲು ಅನುಭವಿಸಿದ್ದಾರೆ. ಐಗೋಳ್ ಚಿದಾನಂದ ಪಿ.ಟಿ.ಪರಮೇಶ್ವರ್ ನಾಯ್ಕ್ ಜತೆಗಿದ್ದವರು. ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಕೂಡಾ ಐಗೋಳ್ ಚಿದಾನಂದ ಪಿಟಿಪಿಗೆ ಎದುರಾಗಿದ್ದರು.
ಚೀಟಿಯಿಂದ ಗೆಲುವು ನಿರ್ಧಾರ: ಎಂ.ಪಿ.ದೇವೇಂದ್ರಪ್ಪ ಅವರ ಪುತ್ರ ಅಣ್ಣಪ್ಪ ಕೂಡ ಗೆಲುವು ಕಂಡಿದ್ದಾರೆ. ಆದರೆ ಚೀಟಿ ಎತ್ತುವ ಮೂಲಕ ಗೆಲುವು ನಿರ್ಧರಿಸಲಾಯಿತು.
ಗೆಲುವು ಕಂಡವರು..: ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ವಕೀಲ ಐಗೋಳ ಚಿದಾನಂದ, ಸೋಗಿ ವಿಜಯ್ ಕುಮಾರ್, ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ, ಹೊಸಪೇಟೆ ಸಂದೀಪ್ ಸಿಂಗ್, ಕಂಪ್ಲಿ ಮೂಕಯ್ಯ ಸ್ವಾಮಿ, ಕುರುಗೋಡು ಹುಲುಗಪ್ಪ, ಬಳ್ಳಾರಿ ನವೀನ್, ಹರಪನಹಳ್ಳಿ ಹರೊನಹಳ್ಳಿ ಅಣ್ಣಪ್ಪ, ಹೊಸಪೇಟೆ ಎಲ್.ಎಸ್.ಆನಂದ್ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಹೊಸಪೇಟೆ ಕೇಂದ್ರ ಕಚೇರಿಯಲ್ಲಿ ಚುನಾವಣೆ ನಡೆಯಿತು. ತಹಸೀಲ್ದಾರ್ ವಿಶ್ವಜಿತ್ ಮಹೆತಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದನ್ನೂ ಓದಿ: ವಿಜಯಪುರದ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಫಲಿತಾಂಶ ಪ್ರಕಟ