ಹೊಸಪೇಟೆ (ವಿಜಯನಗರ) : ವೇದಿಕೆಯ ಮೇಲೆ ಇರುವ ನಾವು ಐದು ಜನರು ರಾಜೀನಾಮೆ ನೀಡಿದ್ದಕ್ಕೆ ಅಖಂಡ ವಿಜಯನಗರ ಜಿಲ್ಲೆ ಸ್ಥಾಪನೆಯಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ನಗರದಲ್ಲಿಂದು ನಡೆದ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇದಿಕೆಯ ಮೇಲೆ ನಾನು, ಆನಂದ್ ಸಿಂಗ್, ಸೋಮಶೇಖರ್, ನಾರಾಯಣಗೌಡ, ಶಿವರಾಮ್ ಹೆಬ್ಬಾರ ಐದು ಜನ ಪಂಚ ಪಾಂಡವರ ಹಾಗೆ ಇದ್ದೇವೆ. ವಿಜಯನಗರ ಜಿಲ್ಲೆಯ ರಚನೆಗೆ ಆನಂದ್ ಸಿಂಗ್ ಹೇಗೆ ಕಾರಣರಾಗುತ್ತಾರೆ. ಅದಕ್ಕೆ ನಾವು ಕೂಡ ಬೆಂಬಲವಾಗಿ ನಿಂತಿದ್ದೇವೆ. ನಾವೆಲ್ಲಾ ರಾಜೀನಾಮೆ ಕೊಟ್ಟಿದ್ದಕ್ಕೆ ವಿಜಯನಗರ ಜಿಲ್ಲೆ ಆಗಿದೆ ಎಂದರು.
ಮೊದಲು ರಾಜೀನಾಮೆ ಕೊಟ್ಟವರು ಆನಂದ್ ಸಿಂಗ್. ಅವರು ರಾಜೀನಾಮೆ ನೀಡುವ ಮುನ್ನ ಮುಹೂರ್ತ ನೋಡಲಿಲ್ಲ, ರಾಹುಕಾಲವನ್ನು ಗಮನಿಸಲಿಲ್ಲ ಎಂದು ಹಳೆಯ ನೆನಪುಗಳನ್ನು ನೆನಪಿಸಿಕೊಂಡರು. ವಿಜಯನಗರ ಸಾಮ್ರಾಜ್ಯದಂತೆ ಈ ವಿಜಯನಗರ ಜಿಲ್ಲೆ ಮತ್ತೆ ಮುತ್ತು, ರತ್ನಗಳಲ್ಲಿ ಅಳೆಯಬೇಕು. ನಾನು ಜಾಸ್ತಿ ಮಾತನಾಡುವುದಿಲ್ಲ. ನಾನು ಜಾಸ್ತಿ ಮಾತನಾಡಿದ್ರೆ, ಶಿವಪೂಜೆಯಲ್ಲಿ ಕರಡಿ ಬಿಟ್ಟಂತಾಗುತ್ತದೆ. ನಿಮ್ಮ ಚಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಇದೆ ಎಂದು ನಗೆ ಚಟಾಕಿಯನ್ನು ಹಾರಿಸಿದರು.