ಬಳ್ಳಾರಿ: ವಿಶ್ವ ಪರಂಪರೆಯ ತಾಣ ಹಂಪಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳ ಸಂಚಾರ ಖಾಸಗಿ ಸಹಭಾಗಿತ್ವದಲ್ಲಿ ಆರಂಭವಾಗಿದೆ.
ಹಂಪಿಯಲ್ಲಿ ತೈಲ ಬಳಕೆಯ ವಾಹನಗಳಿಂದ ಶಿಲ್ಪ ಸ್ಮಾರಕಗಳಿಗೆ ಭವಿಷ್ಯದಲ್ಲಿ ಧಕ್ಕೆ ಉಂಟಾಗುತ್ತದೆ ಎಂಬ ನಿಟ್ಟಿನಲ್ಲಿ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳ ಓಡಾಟ ಆರಂಭಿಸುವ ಯೋಜನೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ್ದು, ಈ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೊದಲ ಯೋಜನೆಯಾಗಿ ಪ್ರಿವಿಲೆನ್ಸ್ ಕಂಪನಿಯ ಸಹಕಾರದೊಂದಿಗೆ ನಿನ್ನೆಯಿಂದ ಮೂರು ದಿನಗಳ ಕಾಲ ಹಂಪಿಯಲ್ಲಿ ರೈಲು ಮಾದರಿಯ ಬ್ಯಾಟರಿ ಚಾಲಿತ ಬಸ್ಗಳು ಪ್ರಾಯೋಗಿಕ ಸಂಚಾರ ಆರಂಭಿಸಿವೆ.
3 ದಿನಗಳ ನಂತರ ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ಪ್ರಯಾಣ ದರ ನಿಗದಿ ಮಾಡಲಿದೆ. ಪ್ರವಾಸಿಗರಿಗೆ ಹೊರೆಯಾಗದಂತೆ ಸದ್ಯ ಓಡಾಡುವ ಮಾಮೂಲಿ ಬಸ್ಗಳ ದರಕ್ಕಿಂತ ಸ್ವಲ್ಪ ಹೆಚ್ಚಳವಿರಲಿದೆ. ಇದು ಪ್ರಾಧಿಕಾರ ಮತ್ತು ಖಾಸಗಿ ಕಂಪನಿಯು 70:30 ಅನುಪಾತದಲ್ಲಿ ನಿರ್ವಹಣೆ ಮಾಡಲಿದೆ. ಈ ಒಪ್ಪಂದದೊಂದಿಗೆ ಬ್ಯಾಟರಿ ಚಾಲಿತ ವಾಹನಗಳ ಸಂಚಾರ ಆರಂಭವಾಗಲಿದೆ. ಸದ್ಯ ರೈಲು ಮಾದರಿಯ ಒಂದು ಹಾಗೂ ಆಟೋ ಮಾದರಿಯ ಮುಕ್ತ ವಾಹನ ಸಂಚಾರ ಆರಂಭವಾಗಲಿದೆ.
ಇವುಗಳ ಓಡಾಟದ ಸಾಧಕ-ಭಾದಕ ನೋಡಿಕೊಂಡು ಮುಂದಿನ ದಿನ ವಾಹನಗಳನ್ನು ಹೆಚ್ಚಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ತಿಳಿಸಿದ್ದಾರೆ.
ಆನ್ ವೀಲ್ಸ್ ಟ್ರೈನ್ ಮಾದರಿ ಬಸ್ ಸೇವೆ:
ವಿಜಯನಗರ ಜಿಲ್ಲೆಯ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರಿವಿಲೆನ್ಸ್ ಗ್ರೀನ್ ಸಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಹಂಪಿಯಲ್ಲಿ 'ಹಂಪಿ ಆನ್ ವೀಲ್ಸ್' ಎಂಬ ಶೀರ್ಷಿಕೆ ಅಡಿ ಪ್ರವಾಸಿಗರಿಗಾಗಿ ಬ್ಯಾಟರಿ ಚಾಲಿತ ವಾಹನ ಸೇವೆ ಲಭ್ಯವಿರಲಿದೆ.
ಹಂಪಿಯಲ್ಲಿ ಪ್ರವಾಸಿಗರ ಮತ್ತು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರೈಲು ಮಾದರಿಯ ಬಸ್ ವ್ಯವಸ್ಥೆ ಮಾಡಲಾಗಿದ್ದು, ಟ್ರಯಲ್ ನಡೆಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.