ಹೊಸಪೇಟೆ : ಸಿಎಂ ಬಿ ಎಸ್ ಯಡಿಯೂರಪ್ಪ ಅವರು ನಮ್ಮ ಬೇಡಿಕೆ ಈಡೇರಿಸದಿದ್ದರೆ ನಾವು ಮತ್ತೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂಬುದು ಬಹುಕಾಲದ ಬೇಡಿಕೆಯಾಗಿದೆ. ನಾವು ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ.
ಧರಣಿ ಸತ್ಯಾಗ್ರಹ ಕುಳಿತಾಗ ರಾಜ್ಯದ ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಭರವಸೆ ನೀಡಿದ್ದಾರೆ. ಧರಣಿ ಕೈ ಬಿಡಿ, ನಿಮ್ಮ ಹೋರಾಟ ಮುಂದುವರೆಸಿ ಅಂದಿದ್ರು. ಅಂದು ಹಿರಿಯರ ಮಾತಿಗೆ ಗೌರವ ಕೊಟ್ಟು ನಾವು ಧರಣಿ ವಾಪಾಸ್ ಪಡೆದಿದ್ದೇವೆ ಎಂದರು.
ಓದಿ: ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡವರನ್ನು ಮತ್ತೆ ಶಾಸಕರನ್ನಾಗಿ ಮಾಡುವುದೇ ಗುರಿ: ಕೂಡಲಸಂಗಮ ಶ್ರೀ
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಸುಮಾರು 10 ಲಕ್ಷ ಜನ ಸೇರಿ ಮೀಸಲಾತಿಗಾಗಿ ಹೋರಾಟ ಮಾಡಿದ್ದಾರೆ. ಇದು ಪಂಚಮಸಾಲಿ ಸಮುದಾಯದಲ್ಲೇ ಇತಿಹಾಸ.
ನೀವು ಸರ್ಕಾರದಲ್ಲಿ ಜವಾಬ್ದಾರಿಯುತ ಸಚಿವರಾಗಿದ್ದೀರಿ. 2ಎ ಮೀಸಲಾತಿ ಹೋರಾಟ ಮಾಡುವವರ ವಿರುದ್ಧ ಹಗುರವಾಗಿ ಮಾತನಾಡೋದು ನಿಮಗೆ ಶೋಭೆ ತರುವುದಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ಧ ಹರಿಹಾಯ್ದರು.