ಹೊಸಪೇಟೆ(ವಿಜಯನಗರ): ಬಾಳೆ ಬೆಲೆ ದಿಢೀರ್ ಕುಸಿತ ಕಂಡಿದ್ದು ಹೊಸಪೇಟೆ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದ ನೂರಾರು ರೈತರಿಗೆ ತಲೆನೋವಾಗಿದೆ. ದರವನ್ನು ಹತೋಟಿಗೆ ತರಲು ರೈತರು ಆಗ್ರಹಿಸಿದ್ದಾರೆ.
ದರಗಳು ಇಳಿಕೆ
ಸುಗಂಧಿ ಬಾಳೆ ಗೊನೆಗೆ 300 ರೂ. ಇತ್ತು. ಈಗ 50 ಹಾಗೂ 60 ರೂಗೆ ಕೇಳಲಾಗುತ್ತಿದೆ. ಮೊದಲು ಕೆ.ಜಿಗೆ ಏಲಕ್ಕಿ ಬಾಳೆ 40 ರೂ. ಇತ್ತು. ಈಗ 16 ರೂ. ಆಗಿದೆ. ಸಕ್ಕರೆ ಬಾಳೆಹಣ್ಣು ಸಹ ದರ ಇಳಿಕೆ ಕಂಡಿದೆ.
ಒಂದು ಎಕೆರೆಗೆ ಖರ್ಚೆಷ್ಟು?
ಒಂದು ಎಕರೆ ಬಾಳೆಗೆ ರೈತರು ಸರಿ ಸುಮಾರು ಒಂದು ಲಕ್ಷ ರೂವರೆಗೆ ಖರ್ಚು ಮಾಡಬೇಕಾಗಿದೆ. ದರ ಇಳಿಕೆಯಿಂದ ಹಾಕಿದ ಬಂಡವಾಳ ಮರಳಿ ಬರುತ್ತಿಲ್ಲ ಎನ್ನುತ್ತಾರೆ ರೈತರು.
ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ಹಾಗಾಗಿ ಸರ್ಕಾರ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮ ಮಾಡಲು ನಿಷೇಧ ಹೇರಿದೆ. ಹೀಗಾಗಿ ಬಾಳೆಗೆ ಬೇಡಿಕೆ ಇಲ್ಲ ಅನ್ನೋದು ದಲ್ಲಾಳಿಗಳ ಮಾತು.
ರೈತ ಗಾಳೆಪ್ಪ ಹಾಗೂ ಚಿದಾನಂದ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ರೈತರಿಗೆ ದರ ಸಿಗುತ್ತಿಲ್ಲ. ಕೊರೊನಾದಿಂದ ಒಂದು ವರ್ಷದಿಂದ ಜಾತ್ರೆ ಹಾಗೂ ಹಬ್ಬಗಳು ಸರಿಯಾಗಿ ನಡೆಯುತ್ತಿಲ್ಲ. ಕಟಾವು ಮಾಡಿದ ಬಾಳೆಯನ್ನು ನಾವೇನು ಮಾಡಬೇಕು ಎಂದು ತಮ್ಮ ಅಳಲು ತೋಡಿಕೊಂಡರು.
ತೋಟಗಾರಿಕೆ ಇಲಾಖೆ ಅಧಿಕಾರಿ ಹೇಳುವುದೇನು?
ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಎಸ್.ಪಿ.ಭೋಗಿ ಪ್ರತಿಕ್ರಿಯಿಸಿ, ಮಾರುಕಟ್ಟೆಗೆ ಹೆಚ್ಚಿನ ಬಾಳೆ ಬಂದಿದೆ. ಹಾಗಾಗಿ ದರ ಇಳಿಕೆಯಾಗಿದೆ. ದರ ಹತೋಟಿಗೆ ಬರುವರೆಗೂ ಬಾಳೆ ಕಟಾವು ಮಾಡಬಾರದು. ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.