ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಂಟನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಅಂದ್ರಾಳು ಸೀತಾರಾಮ್ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿ ಕಾಂಗ್ರೆಸ್ ಅಭ್ಯರ್ಥಿ ರಾಮಾಂಜನೇಯ, ಕಾರ್ಯಕರ್ತೆ ಕಾಮಾಕ್ಷಿ ರೆಡ್ಡಿಯವರು ಇಂದು ಎಪಿಎಂಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ನಿನ್ನೆ ಸಂಜೆಯೊತ್ತಿಗೆ ಅಂದ್ರಾಳು ಪ್ರದೇಶ ವ್ಯಾಪ್ತಿಯ ಮಸೀದಿ ಸಮೀಪ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಬಳ್ಳಾರಿ ನಗರ ಶಾಸಕ ಗಾಲಿ ಸೋಮ ಶೇಖರರೆಡ್ಡಿ ಅವರ ಸಮಕ್ಷಮದಲ್ಲೇ ಬಿಜೆಪಿ ಅಭ್ಯರ್ಥಿ ಅಂದ್ರಾಳು ಸೀತಾರಾಮ್ ಹಾಗೂ ಸಹಚರರು ಕಾಂಗ್ರೆಸ್ ಅಭ್ಯರ್ಥಿ ರಾಮಾಂಜನೇಯವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಜೀವ ಬೆದರಿಕೆಯೊಡ್ಡಿದ ಆರೋಪವೂ ಕೂಡ ಕೇಳಿ ಬಂದಿದೆ. ಇಂದು ಬೆಳಗ್ಗೆ 8.30 ಗಂಟೆಗೆ ಏಕಾಏಕಿ ಕಾಂಗ್ರೆಸ್ ಅಭ್ಯರ್ಥಿ ಮನೆಗೆ ನುಗ್ಗಿದ ಬಿಜೆಪಿ ಅಭ್ಯರ್ಥಿ ಸೀತಾರಾಮ್ ಹಾಗೂ ಸಹಚರರು ಕೊಲೆ ಬೆದರಿಕೆ ಹಾಕಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತೆ ಕೂಡ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಮಾಂಜನೇಯವರು, ಶಾಸಕ ಗಾಲಿ ಸೋಮ ಶೇಖರರೆಡ್ಡಿ ಹಾಗೂ ಬಿಜೆಪಿ ಅಭ್ಯರ್ಥಿ ಸೀತಾರಾಮ್ ಅವರಿಂದ ಜೀವ ಬೆದರಿಕೆ ಇದೆ. ಅವರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವೆ. ಆದರೆ, ಇಲ್ಲಿ ಕೇಸ್ ತೆಗೆದುಕೊಳ್ಳುತ್ತಿಲ್ಲ. ಜಿಲ್ಲಾ ನ್ಯಾಯಾಲಯದ ಪರವಾನಗಿ ಪಡೆದುಕೊಂಡೇ ಕೇಸ್ ದಾಖಲಿಸೋದಾಗಿ ಪೊಲೀಸರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಯುವ ಮುಖಂಡ ಜೆ.ಎಸ್. ಆಂಜನೇಯಲು ಮಾತನಾಡಿ, ಶಾಸಕ ಸೋಮ ಶೇಖರರೆಡ್ಡಿಯವರು ಮತ್ತೆ ರಿಪಬ್ಲಿಕ್ ಬಳ್ಳಾರಿ ಸ್ಥಾಪನೆ ಮಾಡಲಿಕ್ಕೆ ಹೊರಟಿದ್ದಾರೆ. ಇದು ಇಲ್ಲಿ ನಡೆಯೋದಿಲ್ಲ ಎಂದು ಗುಟುರು ಹಾಕಿದ್ರು.
ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘನೆಗೆ 5ಸಾವಿರ ರೂ. ದಂಡ.. ಸಾರ್ವಜನಿಕರ ಆಕ್ರೋಶ
ಕಾಂಗ್ರೆಸ್ ಕಾರ್ಯಕರ್ತೆ ಕಾಮಾಕ್ಷಿರೆಡ್ಡಿ ಮಾತನಾಡಿ, ನನ್ನ ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ಬಿಜೆಪಿಯ ಅಭ್ಯರ್ಥಿ ಸೀತಾರಾಮ್ ಅವರು ಮನೆಗೆ ನುಗ್ಗಿ ಜೀವ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿದ್ರು.