ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಣೆ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾಲಯದ ಕಾರ್ಯಕ್ರಮಗಳಿಗೆ ಮೊದ್ಲು ಹೋಗುತ್ತೇನೆ. ಏಕೆಂದರೆ ಈ ಸಮಾಜ ಬದಲಾವಣೆ ಮಾಡೋ ಶಕ್ತಿ ಯುವಜನರಲ್ಲಿದೆ. ನನ್ನಿಂದ ಅದು ಸಾಧ್ಯವಾಗೋದಿಲ್ಲ. ನನಗೆ ಈಗಾಗಲೇ ವಯಸ್ಸಾಗಿದೆ. ಪದೇ ಪದೆ ಹೇಳೋದನ್ನೇ ಅಭ್ಯಾಸ ಮಾಡಿಕೊಂಡೆ. ಈ ಸಮಾಜದಲ್ಲಿ ಜೈಲಿಗೆ ಹೋದವರನ್ನು ನಾವು ಹಾರ, ತುರಾಯಿ ಹಾಕಿ ಬರಮಾಡಿಕೊಳ್ಳುವ ಸಂಸ್ಕೃತಿ ಇದೆ. ಅಂತಹ ಕೆಟ್ಟ ಸಂಸ್ಕೃತಿಗಳಲ್ಲಿ ನಾವಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ್ರು.
ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿ, ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಬರೋತನಕ ನಾನು ಕೂಪ ಮಂಡೂಕನಾಗಿದ್ದೆ. ಆದರೆ, ಲೋಕಾಯುಕ್ತ ನ್ಯಾಯಮೂರ್ತಿಯಾಗಿ ನೇಮಕವಾದಾಗ, ಈ ಸಮಾಜದ ಅಂಕುಡೊಂಕುಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಭ್ರಷ್ಟಾಚಾರದ ಬಿಸಿಯೂ ತಟ್ಟಿತು ನನಗೆ ಎಂದರು.