ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ಸಚಿವ ಶ್ರೀರಾಮುಲು ಹಾಗೂ ಅನರ್ಹ ಶಾಸಕ ಆನಂದಸಿಂಗ್ ಸ್ವಹಿತಾಸಕ್ತಿಗೋಸ್ಕರ ಸತತ 3 ಬಾರಿ ಉಪ ಚುನಾವಣೆ ಎದುರಿಸುವಂತಾಗಿದೆ.
ಕಳೆದ 2011ರಲ್ಲಿ ಸಚಿವ ಬಿ.ಶ್ರೀರಾಮುಲು ಅವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿದೆ ಎಂಬ ನೆಪವೊಡ್ಡಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2017ರಲ್ಲಿ ಮತ್ತೊಂದು ಉಪ ಚುನಾವಣೆಗೆ ಶ್ರೀರಾಮುಲು ಅಣಿಯಾಗುತ್ತಾರೆ. ಇದೀಗ ಅವಧಿಗೆ ಮುನ್ನವೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅನರ್ಹ ಶಾಸಕ ಆನಂದ ಸಿಂಗ್ ಅವರಿಂದ 3ನೇ ಬಾರಿಗೆ ವಿಜಯನಗರ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಕಳೆದ 15 ವರ್ಷಗಳಲ್ಲಿ ಬಳ್ಳಾರಿ ಗ್ರಾಮಾಂತರ ಹಾಗೂ ವಿಜಯನಗರ ಕ್ಷೇತ್ರ ಸೇರಿ 3 ಬಾರಿ ಉಪ ಚುನಾವಣೆ ಎದುರಿಸುವಲ್ಲಿ ಗಣಿ ಜಿಲ್ಲೆಯ ಮತದಾರರು ಅಣಿಯಾಗಿದ್ದಾರೆ.
ಮೊನ್ನೆ ತಾನೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅನರ್ಹ ಶಾಸಕ ಆನಂದಸಿಂಗ್ ಅವರು, ತಮಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಬಂಡಾಯ ಎದ್ದರು. ಅದನ್ನೇ ದಾಳವನ್ನಾಗಿಟ್ಟು ಕೊಂಡ ಆನಂದಸಿಂಗ್, ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿಸಬೇಕು. ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡೋದನ್ನು ಹಿಂಪಡೆಯಬೇಕೆಂಬ 2 ಪ್ರಮುಖ ಬೇಡಿಕೆಯನ್ನು ಆಗಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಬಳಿಯಿಟ್ಟರು. ಅದಕ್ಕೆ ಕುಮಾರಸ್ವಾಮಿ ಕ್ಯಾರೆ ಅನ್ನಲಿಲ್ಲ. ಇದರಿಂದ ಅಸಮಾಧಾನಗೊಂಡ ಆನಂದಸಿಂಗ್ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದರು. ಆಗ ಸ್ಪೀಕರ್ ಆಗಿದ್ದ ರಮೇಶ ಕುಮಾರ್, ಆನಂದಸಿಂಗ್ ಅವರನ್ನು ಅನರ್ಹಗೊಳಿಸಿದರು.
ಕೇಂದ್ರದಲ್ಲಿ ಶ್ರೀರಾಮುಲು ನಗಣ್ಯ?
ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಬಳ್ಳಾರಿಗೊಂದು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶ್ರೀರಾಮುಲು, ತಮಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ಸಿಗುವುದಿಲ್ಲ ಎಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕಾರಣಕ್ಕೆ ಮರಳಲು ಕಾರಣ ಎಂದು ಮೂಲಗಳು ಹೇಳುತ್ತಿವೆ.