ಬಳ್ಳಾರಿ: ಜಿಲ್ಲಾ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ನಡೆದಿದ್ದು, ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಜಿಲ್ಲಾ ಘಟಕದ ಪದಾಧಿಕಾರಿಗಳು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹಾಗೂ ಸಂಘಟನಾ ಕಾರ್ಯದರ್ಶಿ ಕೆ.ಎ.ರಾಮಲಿಂಗಪ್ಪ ಇಂದು ಸುದ್ದಿಗೋಷ್ಠಿ ನಡೆಸಿ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರ್ ಶೇಖರ್ ಪದಗ್ರಹಣದ ವೇಳೆ ಸೋಮಶೇಖರ ರೆಡ್ಡಿ, ಚನ್ನಬಸವನಗೌಡ ಹಾಗೂ ಕೆ.ಎ.ರಾಮಲಿಂಗಪ್ಪ ಅವರ ಶಕ್ತಿ, ಸಾಮರ್ಥ್ಯದ ಬಗ್ಗೆ ಮಾತನಾಡಿದ್ದರಂತೆ. ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.
ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಮಾತನಾಡಿ, ನಾನು ಹಿಂಬಾಲಿಗಿನಿಂದ ರಾಜಕೀಯಕ್ಕೆ ಬಂದವನಲ್ಲ. ನನ್ನ ಸಾಮರ್ಥ್ಯ ಅವರು ನೋಡಿಕೊಂಡು ಮಾತಾಡಬೇಕಿತ್ತು ಎಂದರು. ಪಕ್ಷದ ಶಾಸಕರಾಗಿ ಅವರು ಹೀಗೆ ಮಾತಾಡಬಾರದಿತ್ತು. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಸಂಘಟನಾ ಕಾರ್ಯದರ್ಶಿ ಕೆ.ಎ.ರಾಮಲಿಂಗಪ್ಪ ಮಾತನಾಡಿ, ಹಗಲೊತ್ತು ಬಿಜೆಪಿ ಪಕ್ಷದ ಧ್ವಜ ಹಿಡಿದು, ರಾತ್ರಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿಯುವ ನಿಮಗೆ, ನಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆಯಿಲ್ಲವೆಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ರು.