ಬಳ್ಳಾರಿ : ಜಿಲ್ಲೆಯ ಸೌಹಾರ್ದ ಸಹಕಾರಿ ಬ್ಯಾಂಕ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ ವಂದನೆ ಹಾಗೂ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ನಡೆಯಿತು. ನಗರದ ಬಿಡಿಎಎ ಮೈದಾನದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ವಿಶ್ವನಾಥ ಹಿರೇಮಠ ಅವರು ಮಾತನಾಡಿ, ಜಿಲ್ಲೆಯಲ್ಲಿ ಇರುವ 2050 ಆಶಾ ಕಾರ್ಯಕರ್ತೆಯರಿಗೆ ಸೌಹಾರ್ದ ಸಹಕಾರಿಗಳಿಂದ 3 ಸಾವಿರ ರೂ. ಚೆಕ್ ವಿತರಣೆ ಮಾಡಲಾಯಿತು.
ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿಗಳಿಂದ ಒಟ್ಟು12 ಲಕ್ಷದ 6 ಸಾವಿರ ರೂ. ನೀಡಲಾಗುತ್ತಿದೆ. ಇಂದು 30 ಆಶಾ ಕಾರ್ಯಕರ್ತೆಯರಿಗೆ ಸಾಂಕೇತಿಕವಾಗಿ 3 ಸಾವಿರ ರೂ. ಚೆಕ್ ನೀಡಲಾಗಿದೆ. ನಾಳೆ ಸಂಜೆ ಒಳಗೆ ಎಲ್ಲಾ ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದರು.
ರಾಜ್ಯ ಸರ್ಕಾರಕ್ಕೆ ಆದಾಯದ ಮೂಲಗಳು ಇಲ್ಲ. ಸರ್ಕಾರದ ಆದೇಶದ ಮೇರೆಗೆ ಆಶಾ ಕಾರ್ಯಕರ್ತೆಯರಿಗೆ ಈ ರೀತಿಯ ಪ್ರೋತ್ಸಾಹಧನವನ್ನು ನೀಡುತ್ತಿದ್ದೇವೆ. ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಸರ್ಕಾರ ಮನವಿ ಮಾಡಿಕೊಂಡಿದ್ದರಿಂದ ಈ ಕಾರ್ಯ ನಡೆಯುತ್ತಿದೆ ಎಂದರು.
ಆಶಾಕಾರ್ಯಕರ್ತೆ ಬಸಮ್ಮ ಮಾತನಾಡಿ, ಜಿಲ್ಲಾಡಳಿತದಿಂದ ಕೊರೊನಾ ವೈರಸ್ ಮುಂಜಾಗೃತೆ ದೃಷ್ಟಿಯಿಂದ ಮಾಸ್ಕ್, ಸ್ಯಾನಿಟೈಜರ್ ನೀಡಿದ್ದಾರೆ. ಸಹಕಾರಿ ಬ್ಯಾಂಕ್ಗಳಿಗೆ 3 ಸಾವಿರ ರೂ. ಚೆಕ್ ವಿತರಣೆ ಮಾಡಿದ್ದು ಖುಷಿ ತಂದಿದೆ. ಮುಂದೆನೂ ಕೆಲಸ ಮಾಡುವ ಹುಮ್ಮಸ್ಸು ಇದೆ ಎಂದರು.
ಸುಕೋ ಬ್ಯಾಂಕ್ನ ಮುಖ್ಯಸ್ಥರು ಪರಿಮಳಾಚಾರ್ಯ ಮಾತನಾಡಿ, ಸಂಡೂರು ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಮತ್ತು ಗೌರವ ಸನ್ಮಾನ ಮಾಡಲಾಗಿದೆ. ಸುಕೋ ಬ್ಯಾಂಕ್ನಿಂದ 100 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಿದ್ದೇವೆ ಎಂದರು.