ಬಳ್ಳಾರಿ : ನೆರೆಯ ಆಂಧ್ರಪ್ರದೇಶ ರಾಜ್ಯದ ಹೈಕೋರ್ಟ್ ಹಾಗೂ ಆಯುಷ್ ಇಲಾಖೆಯು ಆನಂದಯ್ಯ ನಾಟಿ ಔಷಧಿಯಿಂದ ಕೊರೊನಾ ನಿಯಂತ್ರಿಸೋಲ್ಲ. ಅದರ ಹೆಸರಿನಲ್ಲಿ ಈ ನಾಟಿ ಔಷಧಿ ವಿತರಣೆ ಮಾಡೋದು ಸರಿಯಾದುದಲ್ಲ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ. ಆದರೂ ಕೂಡ ರಾಜ್ಯದ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕಳೆದ ಐದಾರು ದಿನಗಳಿಂದಲೂ ಕೂಡ ಈ ಔಷಧಿಯನ್ನ ಹೊಸ ಹಂಪಿಯ ಗೋವಿಂದ ಸರಸ್ವತಿ ಸ್ವಾಮೀಜಿ ಅವರು ವಿತರಣೆಗೆ ಮುಂದಾಗಿದ್ದಾರೆ.
ನೆರೆಯ ಆಂಧ್ರಪ್ರದೇಶ ರಾಜ್ಯದ ಹೈಕೋರ್ಟ್ನ ತೀರ್ಪನ್ನು ಗಾಳಿಗೆ ತೂರಿದ್ದಲ್ಲದೇ, ಕರ್ನಾಟಕ ರಾಜ್ಯದ ಆಯುಷ್ ಇಲಾಖೆಯ ಪರವಾನಿಗೆ ಪಡೆಯದೇ ಪ್ರಾಯೋಗಿಕವಾಗಿ ನಾಟಿ ಔಷಧಿ ಕಿಟ್ ವಿತರಣೆಗೆ ಮುಂದಾಗಿದ್ದಾರೆ. ಕಳೆದ ಐದಾರು ದಿನಗಳಲ್ಲಿ ಸರಿ ಸುಮಾರು 3000 ಸಾವಿರ ಕುಟುಂಬಗಳಿಗೆ ಅಂದರೆ 12,000- 17,000 ಮಂದಿಗೆ ಈ ನಾಟಿ ಔಷಧಿ ವಿತರಣೆ ಮಾಡಲಾಗಿದೆಂದು ಹೊಸ ಹಂಪಿಯ ಗೋವಿಂದ ಸರಸ್ವತಿ ಸ್ವಾಮೀಜಿ ಈ ದಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಂದಾಜು 5 ಲಕ್ಷ ರೂ.ಗಳ ಮೌಲ್ಯದ ಆನಂದಯ್ಯ ನಾಟಿ ಔಷಧಿಯನ್ನ ಕರ್ನಾಟಕ ರಾಜ್ಯಕ್ಕೆ ಉಚಿತವಾಗಿ ಆನಂದಯ್ಯನವರು ಕಳಿಸಿಕೊಟ್ಟಿದ್ದಾರೆ. ಈ ನಾಟಿ ಔಷಧಿ ಸೇವನೆಯಿಂದ ಕೊರೊನಾ ಮುಕ್ತ ಅಥವಾ ಕೊರೊನಾ ಪಾಸಿಟಿವ್ ಮುಕ್ತ ರಾಜ್ಯ ಆಗಲಿದೆ ಎಂದು ಗೋವಿಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಮುಖ್ಯ ಅಧಿಕಾರಿಗಳಿಗೆ ಪತ್ರ : ಕರ್ನಾಟಕ ಸರ್ಕಾರದ ಸಹಕಾರ ಮತ್ತು ಅನುಮತಿ ಕಡ್ಡಾಯವಾಗಿ ನಮಗೆ ಬೇಕಿದೆ. ಈ ದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಈ ಮಾಹಿತಿಯನ್ನ ಶೇರ್ ಮಾಡಿರುವೆ. ಇದಲ್ಲದೇ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆಯೋದಾಗಿ ತಿಳಿಸಿದ್ದಾರೆ.
ಔಷಧಿ ಸಹಕಾರಿಯಾಗಲಿದೆ : ಈ ನಾಟಿ ಔಷಧಿ ಐದು ವಿಧದ ಮಹತ್ವದ ಕುರಿತು ಮಾತನಾಡಿರುವ ಗೋವಿಂದ ಸರಸ್ವತಿ ಸ್ವಾಮೀಜಿ, 'ಪಿ' ಎಂದರೆ ಪ್ರಿವೆಂಟೀವ್. ಎಫ್ ಆ್ಯಂಡ್ ಎಲ್ ಹಾಗೂ ಕಣ್ಣಿನೊಳಗೆ ಹಾಕುವ ಡ್ರಾಫ್ಸ್ ಎಂದು ತೋರಿಸೋ ಮುಖೇನ ಕೊರೊನಾ ಪಾಸಿಟಿವ್ ಆಗಿರುವವರಿಗೆ ಮತ್ತು ಆಕ್ಸಿಜನ್ ಸಮಸ್ಯೆಯನ್ನ ಎದುರಿಸೋರಿಗೆ ಈ ಆನಂದಯ್ಯ ನಾಟಿ ಔಷಧಿ ಸಹಕಾರಿಯಾಗಲಿದೆಂದು ವಿವರಣೆ ನೀಡಿದ್ದಾರೆ.
ಮೂರನೇ ಅಲೆಗೂ ಈ ನಾಟಿ ಔಷಧಿ ಉಪಯುಕ್ತ ಆಗಲಿದೆಯಂತೆ : ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ವದಂತಿ ಇದೆ. ಅದರ ನಿಯಂತ್ರಣಕ್ಕೆ ಈ ಆನಂದಯ್ಯ ನಾಟಿ ಔಷಧಿ ಸಹಕಾರಿಯಾಗಲಿದೆ ಎಂದು ಗೋವಿಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಓದಿ: ರಾಜ್ಯದಲ್ಲಿ Corona ಲಸಿಕೆ ಕೊರತೆ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ