ಹೊಸಪೇಟೆ (ವಿಜಯನಗರ) : ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ರಾಜಕೀಯ ವಲಯದಲ್ಲಿ ಗುಮಾನಿ ಎದ್ದಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಗರದ ರಾಣಿಪೇಟೆಯಲ್ಲಿನ ಶಾಸಕರ ಕಾರ್ಯಾಲಯದ ಬೋರ್ಡ್ ತೆರವುಗೊಳಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈಗಾಗಲೇ ಆನಂದ್ ಸಿಂಗ್ ಅವರು ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಅಲ್ಲದೇ, ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದರು. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಖಾತೆ ಬಗ್ಗೆ ಮಾತನಾಡಿದ್ದರು. ಈ ನಡುವೆಯೇ ಈಗ ಹೊಸಪೇಟೆಯ ಶಾಸಕರ ಕಚೇರಿ ಬೋರ್ಡ್ ನ್ನು ಕ್ರೇನ್ ಮೂಲಕ ತೆರವು ಮಾಡಲಾಗಿದೆ.
ಇನ್ನು, ಸಂಪೂರ್ಣ ಕಚೇರಿ ಬಂದ್ ಮಾಡಲು ಆನಂದ ಸಿಂಗ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಸಮ್ಮಿಶ್ರ ಸರ್ಕಾರದಲ್ಲಿ ಮುನಿಸಿಕೊಂಡು ಆನಂದ ಸಿಂಗ್ ಅವರು ರಾಜೀನಾಮೆ ನೀಡಿದ್ದರು.
ನೋ ಕಮೆಂಟ್ಸ್ : ಆನಂದ್ ಸಿಂಗ್ ಅವರು ಕುಟುಂಬ ಸಮೇತ ಹೋಮದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪುಟ್ಟ ಮಕ್ಕಳು ಆನಂದ್ ಸಿಂಗ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಸಚಿವ ಆನಂದ್ ಸಿಂಗ್ ನಿರಾಕರಿಸಿದರು. ನೋ ಕಮೆಂಟ್ಸ್ ಪ್ಲೀಸ್ ಎಂದು ಹೇಳಿದರು.