ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜನಿ ಸದ್ಧರ್ಮ ಪೀಠಕ್ಕೆ ವಿಜಯನಗರ ಕ್ಷೇತ್ರದ ಅನರ್ಹ ಶಾಸಕ ಆನಂದಸಿಂಗ್ ಭೇಟಿ ನೀಡಿದರು. ಬಿಜೆಪಿಯ ಮಾಜಿ ಶಾಸಕರಾದ ಚಂದ್ರನಾಯ್ಕ ಹಾಗೂ ಕೆ.ನೇಮಿರಾಜ ನಾಯ್ಕ ಅವರೊಂದಿಗೆ ಅನಂದಸಿಂಗ್ ಉಜ್ಜನಿ ಮಠಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿ ವಿಜಯನಗರ ಕ್ಷೇತ್ರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಜಿಂದಾಲ್ ಕಾರ್ಖಾನೆಗೆ ಭೂಮಿ ಪರಭಾರೆ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂಬ ಕಾರಣವೊಡ್ಡಿ ಅನಂದಸಿಂಗ್ ಬಂಡಾಯವೆದ್ದಿದ್ದರು. ಆಗ ನಾನು ಯಾವ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲವೆಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರು. ಆದರೆ ಈಗ ಬಿಜೆಪಿಯ ಮಾಜಿ ಶಾಸಕರೊಂದಿಗೆ ಪ್ರತ್ಯಕ್ಷವಾಗಿರೋದು ಅಚ್ಚರಿ ಮೂಡಿಸಿದೆ.
ಉಜ್ಜನಿ ಶ್ರೀಗಳ ಅಭಯ: ವಿಜಯನಗರ ಕ್ಷೇತ್ರವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಬೇಡಿಕೆಯನ್ನು ಅನರ್ಹ ಶಾಸಕ ಆನಂದ ಸಿಂಗ್ ಅವರು ಉಜ್ಜನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯವ್ರ ಮುಂದಿಟ್ಟರು. ಅದಕ್ಕೆ ಶ್ರೀಗಳು ಸಮ್ನತಿಸಿ, ಇದೇ 18 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಪ್ರಕಟಿಸಿಯೇ ಬಿಟ್ಟರು.
ಮುಂದುವರಿದು ಮಾತನಾಡಿದ ಉಜ್ಜನಿ ಶ್ರೀಗಳು, ಆಡಳಿತಾತ್ಮಕ ಮತ್ತು ಆಭಿವೃದ್ಧಿ ದೃಷ್ಠಿಯಿಂದ ಬಳ್ಳಾರಿ ಜಿಲ್ಲೆಯಿಂದ ವಿಭಜನೆ ಮಾಡಿ ವಿಜಯನಗರವನ್ನು ಜಿಲ್ಲಾ ಕೆಂದ್ರವನ್ನಾಗಿ ಮಾಡುವುದರಿಂದ ಜನರ ಕೆಲಸ ಕಾರ್ಯಗಳು ತ್ವರಿತವಾಗಿ ನಡೆಯಲಿವೆ. ವಿಜಯನಗರ ಜಿಲ್ಲಾ ಕೇಂದ್ರಕ್ಕಾಗಿ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಉಜ್ಜನಿ ಪೀಠದಿಂದ ಅಂದಾಜು 2 ಲಕ್ಷ ಕರಪತ್ರಗಳನ್ನು ವಿತರಿಸಲಾಗುವುದು ಎಂದರು.
ಅನರ್ಹ ಶಾಸಕ ಆಂನದಸಿಂಗ್ ಮಾತನಾಡಿ, ವಿಜಯನಗರ ಕ್ಷೇತ್ರವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಮಠಾಧೀಶರು, ಸಾರ್ವಜನಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿಕೊಂಡರು. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹಡಗಲಿ, ಕೊಟ್ಟೂರು, ಕೂಡ್ಲಿಗಿ ಹಾಗೂ ಇತ್ತೀಚೆಗೆ ಸೇರ್ಪಡೆಗೊಂಡ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲಾ ಕೇಂದ್ರದಿಂದ ದೂರವಿದ್ದು, ವಿಜಯನಗರ ಜಿಲ್ಲೆಯಾದರೆ ತುಂಬಾ ಅನುಕೂಲವಾಗಲಿದೆ ಎಂದರು.
ಕೊಟ್ಟೂರು ಬಿಜೆಪಿ ಬ್ಲಾಕ್ ಅಧ್ಯಕ್ಷ ವಿರೇಶಗೌಡ, ಎಂ.ಎಂ.ಜೆ. ವಾಗೀಶ, ವಕೀಲ ಮರುಳಸಿದ್ದಪ್ಪ, ಪೀಠದ ವ್ಯವಸ್ಥಾಪಕ ವೀರೇಶ, ಚನ್ನಬಸಯ್ಯ ಇದ್ದರು.