ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ಆರೋಗ್ಯ ಇಲಾಖೆ ಉಪಕೇಂದ್ರದ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮೇಲೆ ಗ್ರಾಮ ಪಂಚಾಯತ್ನ ಮಾಜಿ ಸದಸ್ಯ ಲೈಂಗಿಕ ದೌರ್ಜನವೆಸಗಿ ಕೊಲೆ ಬೆದರಿಕೆಯೊಡ್ಡಿರುವ ಆರೋಪ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ.ಜಿ.ಬಸವರಾಜ ಎಂಬಾತ ಕೊರೊನಾ ವಾರಿಯರ್ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿ ಹಾಗೂ ಕೊಲೆ ಬೆದರಿಕೆ ಹಾಕಿರುವ ಆರೋಪಿ. ಈತನ ವಿರುದ್ಧ ಕಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ:
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕೆಂಚಮ್ಮನಹಳ್ಳಿ ಗ್ರಾಮದಲ್ಲಿ ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಉಪಕೇಂದ್ರದ ವಸತಿ ಗೃಹದ ನಿವಾಸದಲ್ಲಿ ತಂಗಿದ್ದ ವೇಳೆ, ಕಾರಣವಿಲ್ಲದೇ ತಾನು ತಂಗಿದ್ದ ವಸತಿ ಗೃಹಕ್ಕೆ ಕೆ.ಜಿ. ಬಸವರಾಜ ಹಾಗೂ ಆತನ ಸಹಚರ ನುಗ್ಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.
ಅಲ್ಲದೇ, ನನಗೆ ದೈಹಿಕವಾಗಿ ಹಲ್ಲೆ ಮಾಡಿದ್ದು, ನಾನು ಕರ್ತವ್ಯದಲ್ಲಿದ್ದಾಗ ಕೈ ಸನ್ನೆ-ಬಾಯಿ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ. ನಾನು ಹೇಳಿದಂತೆ ಕೇಳು ಇಲ್ಲವಾದರೆ ಇಲ್ಲಿಂದ ನಿನ್ನನ್ನ ಎತ್ತಂಗಡಿ ಮಾಡಿಸುತ್ತೇನೆ ಎಂದು ಕರ್ತವ್ಯದಲ್ಲಿದ್ದಾಗ ನನಗೆ ಅನಗತ್ಯವಾಗಿ ಕಿರುಕುಳ ನೀಡಿದ್ದಾನೆ. ಅವರ ತಂದೆಯ ಪ್ರೇರಣೆಯಿಂದ ಈತ ನನಗೆ ಕೊಡಬಾರದು ಕಷ್ಟಗಳನ್ನ ಕೊಡುತ್ತಿದ್ದಾನೆ ಎಂದು ಆರೋಗ್ಯ ಇಲಾಖೆ ಸಹಾಯಕಿ ಆರೋಪಿಸಿದ್ದಾರೆ.
ನನ್ನ ಗಂಡನ ಮೇಲೂ ಕೂಡ ಈತ ದೌರ್ಜನ್ಯ ನಡೆಸಿದ್ದು, ಅವರನ್ನ ಕೊಲೆ ಮಾಡಲು ಯತ್ನಿಸಿದ್ದಾನೆ. ಇದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ನನ್ನ ಅವಮಾನಿಸಿದ್ದಾನೆ. ಕೂಡಲೇ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ.ಜಿ. ಬಸವರಾಜ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೊರೊನಾ ವಾರಿಯರ್ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.