ಬಳ್ಳಾರಿ : ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಫಾರಂ ನಂಬರ್ 3 ಕೊಡಲು ಅರ್ಜಿದಾರರಿಂದ ಅಂದಾಜು 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆಂಬ ವಿಡಿಯೋ ಒಂದು ಎಲ್ಲೆಡೆ ಹರಿದಾಡುತ್ತಿದ್ದು, ಜಿಲ್ಲಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ, ರಾತ್ರೋರಾತ್ರಿ ಮಹಾನಗರ ಪಾಲಿಕೆ ಆಯುಕ್ತರ ಕಾರು ಹೊರಗಡೆ ಬರುತ್ತದೆ. ಆ ಕಾರಿನೊಳಗೆ ಮಹಿಳೆಯೊಬ್ಬರು ಹಣ ಪಡೆಯುತ್ತಾರೆ. ಹಣ ಕೊಡಲು ಬಂದ ವ್ಯಕ್ತಿ "ಸರ್ ಕೊಟ್ಟಿದ್ದು ಮೇಡಂ, ಕೊಟ್ಟು ಬಿಡಪ್ಪ ಅಂದ್ರು. ನನಗೆ ಸಮಯವಿರಲಿಲ್ಲ, ಹಾಗೆ ರಾತ್ರಿ ಬಂದೆ ಮೇಡಂ" ಎಂದು ಹೇಳುತ್ತಾರೆ. ಹಣ ಪಡೆದ ಮಹಿಳೆ "ಒಕೆ, ಧನ್ಯವಾದ" ಎಂದು ಹೇಳಿ ಹೊರಟು ಹೋಗುತ್ತಾರೆ. ವಿಡಿಯೋದಲ್ಲಿ ಹಣ ನೀಡಲು ಬಂದ ವ್ಯಕ್ತಿ ಬಳ್ಳಾರಿ ನಿವಾಸಿ ಬದ್ರಿ ಮತ್ತು ಹಣ ಪಡೆದ ಮಹಿಳೆ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ ತುಷಾರಮಣಿ ಎಂದು ಹೇಳಲಾಗ್ತಿದೆ. ವಿಡಿಯೋದಲ್ಲಿ ಇಬ್ಬರ ಮುಖವೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಇನ್ನು, ಆಯುಕ್ತೆ ಹಣ ಪಡೆದಿದ್ದರೂ, ಅದು ವೈಯುಕ್ತಿಕ ವ್ಯವಹಾರವೋ ಅಥವಾ ಲಂಚದ ಹಣವೋ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ಇನ್ನು ಹಣ ನೀಡಲು ಬಂದ ಬದ್ರಿ ಎಂದು ಹೇಳಲಾಗುವ ವ್ಯಕ್ತಿ, " ಸರ್ ಹಣ ಕೊಟ್ರು ಮೇಡಂ" ಎನ್ನುತ್ತಾನೆ. ಹಾಗಾದರೆ, ಆ ಸರ್ ಯಾರೂ ಎಂಬ ಬಗ್ಗೆಯೂ ಕುತೂಹಲ ಮೂಡಿದೆ.
ಇದನ್ನೂ ಓದಿ: ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಳ್ಳಾರಿ ಪಾಲಿಕೆ ಆಯುಕ್ತರ ಆಪ್ತ ಸಹಾಯಕ
ತನ್ನ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಆಯುಕ್ತೆ ಎಂ.ವಿ ತುಷಾರಮಣಿ, ಅದೆಲ್ಲ "ಫೇಕ್ ವಿಡಿಯೋ, ನಾನು ಯಾವುದೇ ಲಂಚದ ಹಣದ ಬೇಡಿಕೆ ಇಟ್ಟಿಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಈ ಷಡ್ಯಂತ್ರ ನಡೆದಿದೆ. ಅವರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸದೇ ಹೋದಾಗ, ಇಂತಹ ಆರೋಪ ಮಾಡ್ತಿದ್ದಾರೆ" ಎಂದು ಹೇಳಿದ್ದಾರೆ.
ನನ್ನ ಆತ್ಮವಿಶ್ವಾಸ ಕುಗ್ಗಿಸುವ ಷಡ್ಯಂತ್ರ : ನಾನು ಹೆಣ್ಣು ಮಗಳಾಗಿದ್ದಕ್ಕೆ ಈ ಶಿಕ್ಷೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಈ ರೀತಿಯ ಕುತಂತ್ರ ನಡೆಯುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರಿಂದಲೂ ಹಣ ಪಡೆಯುವುದಿಲ್ಲ. ಇದೆಲ್ಲಾ, ಫ್ಯಾಬ್ರಿಕೇಟೇಡ್ ವಿಡಿಯೋ ಮತ್ತು ಆಡಿಯೋ ಆಗಿದೆ. ಈ ಕುರಿತು ನಾನು ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇನೆ ಎಂದಿದ್ದಾರೆ.
ಇತ್ತೀಚೆಗೆ ಪಾಲಿಕೆ ಆಯುಕ್ತೆ ತುಷಾರಮಣಿ ಅವರ ಆಪ್ತ ಸಹಾಯಕ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದು ಇಲ್ಲಿ ಸ್ಮರಿಸಬಹುದು.