ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶಾಸಕ ಗಾಲಿ ಕರುಣಾಕರರೆಡ್ಡಿ ನೇತೃತ್ವದಲ್ಲಿ ಹರಪನಹಳ್ಳಿ ಜಿಲ್ಲೆಯನ್ನಾಗಿ ಮಾಡಲು ಹೋರಾಟದ ರೂಪುರೇಷೆ ತಯಾರಿಸಲು ಸರ್ವ ಪಕ್ಷದ ಸಭೆ ಜರುಗಿತು.
ಸಭೆಯಲ್ಲಿ ಶಾಸಕ ಜಿ. ಕರುಣಾಕರರೆಡ್ಡಿ ಮಾತನಾಡಿ, ಹೊಸಪೇಟೆಯನ್ನು ಜಿಲ್ಲೆಯನ್ನಾಗಿ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ತಾಂತ್ರಿಕವಾಗಿ ಹೊಸಪೇಟೆಯನ್ನು ಜಿಲ್ಲೆಯನ್ನಾಗಿ ಮಾಡಲಾಗುವುದಿಲ್ಲ. ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಕೊಟ್ಟೂರು ಎಲ್ಲವೂ ಸಮೀಪದಲ್ಲಿದ್ದು, ಹರಪನಹಳ್ಳಿ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳವಾಗಿದೆ. ಅಲ್ಲದೇ ಜಿಲ್ಲಾ ಕಚೇರಿಗಳನ್ನು ತೆರೆಯಲು ಸಾಕಷ್ಟು ಜಮೀನು ಕೂಡ ಇದೆ. ಹೀಗಾಗಿ ಹರಪನಹಳ್ಳಿ ಜಿಲ್ಲೆಯನ್ನಾಗಿ ಮಾಡಲು ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಘೋಷಿಸಿದರು.
ಹರಪನಹಳ್ಳಿಯನ್ನು ಜಿಲ್ಲೆ ಮಾಡುವಂತೆ ಒತ್ತಾಯಿಸಿ ಶೀಘ್ರವೇ ಮುಖ್ಯಮಂತ್ರಿ ಬಳಿ ನಿಯೋಗ ಕರೆದೊಯ್ಯಲಾಗುವುದು. ಮುಖ್ಯಮಂತ್ರಿ ಬಳಿ ಚರ್ಚಿಸಿ ದಿನಾಂಕ ನಿಗದಿಗೊಳಿಸಲಾಗುವುದು. ಜಿಲ್ಲಾ ಹೋರಾಟವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಬೇಡ. ನಾನು ಜನಪ್ರತಿನಿಧಿಯಾಗಿ ನನ್ನ ಕೆಲಸ ಮಾಡುತ್ತೇನೆ. ಸಿಎಂ ಬಳಿ ನಿಯೋಗ ತೆರಳಿದಾಗ ಮುಖ್ಯಮಂತ್ರಿ ಪ್ರತಿಕ್ರಿಯೆ ನೋಡಿಕೊಂಡು ಹೋರಾಟದ ಮುಂದಿನ ರೂಪುರೇಷೆಗಳನ್ನು ಚರ್ಚಿಸೋಣ ಎಂದರು.
ಹೋರಾಟಗಾರರು, ಹೋರಾಟಕ್ಕೆ ಶಾಸಕರು ಬೆಂಬಲ ಕೊಡಬೇಕು ಎಂದು ಹೇಳುತ್ತಿದ್ದಾರೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಜಿಲ್ಲೆಯಾದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಈ ಪ್ರದೇಶ ಅಭಿವೃದ್ಧಿ ಹೊಂದಲಿದೆ. ಹೀಗಾಗಿ ಜಿಲ್ಲೆಗಾಗಿ ಸದನದ ಒಳಗೆ ಮತ್ತು ಹೊರಗೆ ಎರಡೂ ಕಡೆಗೂ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಜಿಲ್ಲಾ ಹೋರಾಟಕ್ಕೆ ಶಾಸಕರು ಕೈಜೋಡಿಸಿರುವುದು ಹೋರಾಟಕ್ಕೆ ಸರಿಯಾದ ಮಾರ್ಗ ಸಿಕ್ಕಂತಾಗಿದೆ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹರಪನಹಳ್ಳಿ ಜಿಲ್ಲಾ ಕೇಂದ್ರವಾದಲ್ಲಿ ಅಭಿವೃದ್ಧಿ ಹೊಂದಲಿದೆ. ಜಿಲ್ಲಾ ಹೋರಾಟದ ಕಿಚ್ಚು ಗ್ರಾಮಾಂತರ ಪ್ರದೇಶಕ್ಕೂ ಹಬ್ಬಬೇಕಿದ್ದು, ನಮ್ಮ ಧ್ವನಿ ಮುಖ್ಯಮಂತ್ರಿ ಅವರ ಗಮನಕ್ಕೆ ತರಲು ಸಿಎಂ ಬಳಿ ನಿಯೋಗ ಕರೆದುಕೊಂಡು ಹೋಗಬೇಕು. ಜನಪ್ರತಿನಿಧಿಗಳು ಸದನದ ಒಳಗೆ, ಜನರು ಹೊರಗೆ ಹೋರಾಟ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.