ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿರುವ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ನೌಕರರನ್ನ ಕೋವಿಡ್ - 19 ಟೆಸ್ಟ್ ಗೆ ಒಳಪಡಿಸಬೇಕೆಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಒತ್ತಾಯಿಸಿದ್ದಾರೆ.
ನಗರದ ತಾಳೂರು ರಸ್ತೆಯಲ್ಲಿನ ಸಿಸಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಉಕ್ಕು ಕಾರ್ಖಾನೆ ನೌಕರರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ಜಿಂದಾಲ್ ವಿದ್ಯಾನಗರ ಸೇರಿದಂತೆ ಉಳಿದೆಡೆ ಅಪಾರ್ಟ್ಮೆಂಟ್ಗಳಲ್ಲಿ ನೆಲೆಸಿರುವ ಹೊರ ರಾಜ್ಯಗಳಿಂದ ಬಂದಂತಹ ಎಲ್ಲ ನೌಕರರಿಗೂ ಕೂಡ ಕೋವಿಡ್-19 ಟೆಸ್ಟ್ ಮಾಡಿಸಬೇಕೆಂದರು.
ಜುಬಿಲಂಟ್ನಂತೆ ಕಂಪನಿಯಂತೆ ಜಿಂದಾಲ್ ಕೂಡ ದೊಡ್ಡ ಉಕ್ಕು ಸ್ಥಾವರ ಕಾರ್ಖಾನೆಯಾಗಿದ್ದು, ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಕೆಲಸ ಮಾಡುವ ಎಲ್ಲಾ ನೌಕರರನ್ನು ಕೂಡ ಕೋವಿಡ್-19 ಟೆಸ್ಟ್ಗೆ ಒಳಪಡಿಸಬೇಕು. ಜಿಂದಾಲ್ ಕಾರ್ಖಾನೆಯ ಆವರಣದಲ್ಲಿಯೇ ಕ್ವಾರಂಟೈನ್ ಸೆಂಟರ್ಗಳನ್ನ ತೆರೆಯಬೇಕು. ಜಿಂದಾಲ್ ಉಕ್ಕು ಕಾರ್ಖಾನೆಯವರು ಕೋವಿಡ್-19 ಸೋಂಕನ್ನು ಸಮರ್ಥವಾಗಿ ಎದುರಿಸಲು ಮುಂದಾಗಬೇಕೆಂದು ಶಾಸಕ ರೆಡ್ಡಿ ಕೋರಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗದು:
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ಶಾಲೆ - ಕಾಲೇಜುಗಳು ಶುರು ಮಾಡಿದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗದು. ಹೀಗಾಗಿ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನ ಕೈಗೊಳ್ಳಲಿದ್ದಾರೆ. ಸದ್ಯಕ್ಕಂತೂ ಶಾಲೆ - ಕಾಲೇಜುಗಳುನ್ನು ಪುನಾರಂಭಿಸೋದು ಬೇಡವೆಂದು ಶಾಸಕ ಸೋಮಶೇಖರರೆಡ್ಡಿ ಅಭಿಪ್ರಾಯಪಟ್ಟರು.
ಈ ವೇಳೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಸ್. ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್, ವೀರ ಶೇಖರರೆಡ್ಡಿ ಉಪಸ್ಥಿತರಿದ್ದರು.