ಹೊಸಪೇಟೆ: ದೇಶಾದ್ಯಂತ ನಿರುದ್ಯೋಗ ತಾಂಡವಾಡುತ್ತಿದೆ. ವಿದ್ಯಾರ್ಥಿ-ಯುವಕರು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಉದ್ಯೋಗ ಸೃಷ್ಟಿಸುವಂತೆ ಆಗ್ರಹಿಸಿ ಎಐಡಿವೈಒ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್) ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೊರೊನಾ ಲಾಕ್‌ಡೌನ್ ಹಿನ್ನೆಲೆ ದೇಶಾದ್ಯಂತ 2.7 ಲಕ್ಷ ಕಾರ್ಖಾನೆಗಳು ಮುಚ್ಚಿವೆ. ಇದರಿಂದ 12 ಕೋಟಿ ನಿರುದ್ಯೋಗಿಗಳು ಸೃಷ್ಟಿಯಾಗಿದ್ದಾರೆ. ತುರ್ತಾಗಿ ಯುವಕರಿಗೆ ಹಾಗೂ ದುಡಿಯುವ ವರ್ಗಕ್ಕೆ ಉದ್ಯೋಗ ನೀಡಬೇಕು. ಆದರೆ, ಮಧ್ಯಪ್ರದೇಶ ಸರ್ಕಾರ ಉದ್ಯೋಗಕ್ಕಾಗಿ ಪ್ರತಿಭಟಿಸುತ್ತಿದ್ದ ಯುವಕ ಮೇಲೆ ಲಾಠಿ ಚಾರ್ಜ್ ಮಾಡಿದೆ. ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಸ್ಎಸ್ಸಿ ರೈಲ್ವೆ ಹಾಗೂ ಶಿಕ್ಷಕರು ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸುವ ಬದಲು, ಸಾಮಾನ್ಯ ಜನರು ಮತ್ತು ಯುವಕರ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಸಿದುಕೊಳ್ಳುವಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.
ತಹಶೀಲ್ದಾರ್ ಹೆಚ್.ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅವರು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಮುಖಂಡರಾದ ಜಗದೀಶ, ಹುಲಗಪ್ಪ ಇದ್ದರು.