ಹೊಸಪೇಟೆ: ನಾಯಕನಹಟ್ಟಿಯ ಅಲೆಮಾರಿ ಕೊರಚ ಸಮುದಾಯದ ಮೂವರ ಭೀಕರ ಕೊಲೆಯನ್ನು ಮಾಡಿರುವುದನ್ನು ಖಂಡಿಸಿ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಯುವಜನ ತಾಲೂಕು ಒಕ್ಕೂಟದ ಕಾರ್ಯಕರ್ತರು ನಗರದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಚಳ್ಳಿಕೇರಿಯ ಅಲೆಮಾರಿ ಕೊರಚ ಸಮುದಾಯದ ಶೀನಪ್ಪ ಹಾಗೂ ಅವರ ಮಕ್ಕಳಾದ ಮಾರೇಶ ಮತ್ತು ಯಲ್ಲೇಶ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶೀನಪ್ಪ ಕೊಲಂಹಳ್ಳಿಯಲ್ಲಿ ಹಂದಿ ಸಾಕಾಣಿಕೆ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಆದರೆ, ರಾತ್ರಿ ವೇಳೆ ದುಷ್ಕರ್ಮಿಗಳು ಖಾರದ ಪುಡಿ ಕಣ್ಣಿಗೆ ಎರಚಿ, ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆ ಮಾಡಿರುವವರನ್ನು ಪತ್ತೆ ಹಚ್ಚಿ, ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಅಲ್ಲದೇ, ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಕಚೇರಿಯ ಶಿರಸ್ತೇದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸಣ್ಣ ಮಾರೆಪ್ಪ, ಕೆ.ಬಸವರಾಜ, ಡಾ.ಮಲ್ಲಿಕಾರ್ಜುನ ಬಿ. ಮಾನ್ಪಡೆ ಇನ್ನಿತರರಿದ್ದರು.