ಹೊಸಪೇಟೆ: ಹಂಪಿಯ ತಳವಾರಗಟ್ಟ ಪ್ರದೇಶದಲ್ಲಿ ಅಕ್ರಮವಾಗಿ ಮುರ್ರಂ (ಮಣ್ಣು) ಸಾಗಣೆ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಈಗಾಗಲೇ ವಿಚಾರಣೆ ನಡೆಸಲಾಗಿದೆ ಎಂದು ವಿಶ್ವ ಪರಂಪರೆ ಹಂಪಿ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರದ ಪ್ರಭಾರ ಆಯುಕ್ತ ಸಿದ್ದರಾಮೇಶ್ವರ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಸ್ತೆಗಾಗಿ ಮುರ್ರಂ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದಿದ್ದು, ಈಗಾಗಲೇ ಇದನ್ನು ನಿಲ್ಲಿಸಲಾಗಿದೆ. ಅಲ್ಲದೇ, ಮುರ್ರಂ ಸಾಗಣೆ ಮಾಡದಂತೆ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಒಂದು ವೇಳೆ ಕಾನೂನು ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು." ಎಂದು ತಿಳಿಸಿದರು.
ಇದನ್ನು ಓದಿ: ಮಗನ 'ನಿತ್ಯ' ನಗುವಿಗೆ ಚಂದ್ರನನ್ನೇ ಉಡುಗೊರೆ ನೀಡಿದ ಅಪ್ಪ
ಪುರಾತತ್ವ ಸೆಕ್ಯುರಿಟಿ ಸಿಬ್ಬಂದಿ ಸ್ಥಳದಲ್ಲಿದ್ದು, ಹೆಚ್ಚಿನ ಭದ್ರತೆ ಒದಗಿಸುವಂತೆ ಈಗಾಗಲೇ ಪತ್ರದ ಮುಖೇನ ತಿಳಿಸಲಾಗಿದೆ. ಹಂಪಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯಬಾರದು. ತಹಶೀಲ್ದಾರ್ ಅವರಿಗೆ ಭದ್ರತೆ ಹೆಚ್ಚಿಸಲು ಸೂಚನೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.