ಹೊಸಪೇಟೆ : ಸರ್ಕಾರದ ಕೋವಿಡ್ ನಿಯಮ ಉಲ್ಲಂಘಿಸಿ ನಗರದ ಷಾ ಭವರಲಾಲ್ ಬಿಎಡ್ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ.
ಕೊರೊನಾ ಹಿನ್ನೆಲೆ ಎಲ್ಲಾ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಆದರೆ, ಷಾ ಭವರಲಾಲ್ ಕಾಲೇಜು ಮಾತ್ರ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಕಳೆದೊಂದು ತಿಂಗಳಿಂದ ತರಗತಿ ನಡೆಸುತ್ತಿದೆ ಎನ್ನಲಾಗುತ್ತಿದೆ. ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯಾಚರಿಸುವ ಷಾ ಭವರಲಾಲ್ ಕಾಲೇಜು, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತದೆ.
ಈ ಹಿಂದೆ ಈ ಕಾಲೇಜು ನಿಯಮಬಾಹಿರವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ನೀಡಿದ ಆರೋಪ ಎದುರಿಸಿತ್ತು. ಹಾಗಾಗಿ ಬಳ್ಳಾರಿ ವಿವಿ ಕಾಲೇಜಿಗೆ 2 ಲಕ್ಷ ರೂ.ದಂಡ ವಿಧಿಸಿತ್ತು. ಇದರ ಬೆನ್ನಲ್ಲೇ ಕಾಲೇಜು ಮತ್ತೊಮ್ಮೆ ಸರ್ಕಾರದ ನಿಯಮ ಮೀರಿದೆ ಎಂದು ಆರೋಪಿಸಲಾಗಿದೆ.
ಈ ಕರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ವಿಶ್ವನಾಥ ಗೌಡ, ಕಾಲೇಜಿನಲ್ಲಿ ತರಗತಿ ನಡೆಸುತ್ತಿಲ್ಲ. ಆನ್ಲೈನ್ ಪಾಠ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿಲ್ಲ, ಹಾಗಾಗಿ ಕೆಲ ವಿದ್ಯಾರ್ಥಿಗಳು ತರಗತಿ ಬಂದಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳಿಗೆ ಮೊಬೈಲ್ ಹಾಗೂ ಇಂಟರ್ನೆಟ್ ಸಮಸ್ಯೆ ಇದೆ. ಹಾಗಾಗಿ ಪಾಠ ಕೇಳಲು ಆಗುತ್ತಿಲ್ಲ ಹೀಗಾಗಿ ಕಾಲೇಜಿಗೆ ಬಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಇದುವರೆಗೆ 6 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ 40 ಜನ ಮೃತಪಟ್ಟಿದ್ದಾರೆ. ಪ್ರತಿ ದಿನ 10 ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಪ್ರಸ್ತುತ 94 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.