ಹೊಸಪೇಟೆ : ಲಾಕ್‌ಡೌನ್ ಆದೇಶದ ನಡುವೆಯೂ ರಸ್ತೆಗಿಳಿದ ವಾಹನಗಳಿಗೆ ಕಡಿವಾಣ ಹಾಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೂ ನಗರದಲ್ಲಿ ಸೋಮವಾರ ಅನಧಿಕೃತವಾಗಿ ರಸ್ತೆಗಿಳಿದ 11 ದ್ವಿಚಕ್ರ ವಾಹನಗಳನ್ನು ಕರ್ತವ್ಯನಿರತ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಗೊಳಪಡುವ ಪ್ರದೇಶಗಳಲ್ಲಿ ಈಗಾಗಲೇ ಸಾರ್ವಜನಿಕರು ಅನಗತ್ಯ ಓಡಾಡದಂತೆ ಎಚ್ಚರಿಕೆಯನ್ನು ನೀಡಿದ್ದರು. ಆದರೂ ಸಾರ್ವಜನಿಕರು ಇದನ್ನು ಲೆಕ್ಕಿಸದೆ ಬೈಕ್ಗಳ ಮೂಲಕ ತಿರುಗಾಡುತ್ತಿದ್ದರು. ಸಹಾಯಕ ಆಯುಕ್ತರು ಸಾರ್ವಜನಿಕರ ಓಡಾಟಕ್ಕೆ ನಿರ್ದಿಷ್ಟ ಸಮಯವನ್ನು ಸೂಚಿಸಿದ್ದಾರೆ. ನಿಗದಿತ ಸಮಯದಲ್ಲಿ ಅನಗತ್ಯ ಓಡಾಟಕ್ಕೆ ತಡೆ ನೀಡುವುದರ ಜೊತೆಗೆ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.
ಲಾಕ್‌ಡೌನ್ ಆದೇಶದ ದಿನದಿಂದ ಈವರೆಗೂ ಒಟ್ಟು 133 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಪೈಕಿ ಅಸುರಕ್ಷಿತ ಸಂಚಾರ ಹಾಗೂ ನಿಯಮ ಉಲ್ಲಂಘಿಸಿದವರ 7 ವಾಹನಗಳ ಮಾಲೀಕರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.
ಲಾಕ್‌ಡೌನ್ ಆದೇಶ ಕೊನೆಗೊಳ್ಳುವವರೆಗೂ ಅನಧಿಕೃತವಾಗಿ ಸಂಚರಿಸುವ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು. ಆದೇಶ ಮುಗಿದ ನಂತರ ಸೂಕ್ತ ಕಾನೂನು ಕ್ರಮ ಕೈಗೊಂಡು ವಾಹನಗಳನ್ನು ಮಾಲೀಕರಿಗೆ ಹಿಂದಿರುಗಿಸಲಾಗುವುದೆಂದು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ತಿಳಿಸಿದ್ದಾರೆ.