ಬಳ್ಳಾರಿ: ಗಣಿನಗರಿ ಬಳ್ಳಾರಿ ನಗರದಲ್ಲಿ ಎಲ್ಲೆಂದರಲ್ಲೇ ಕುಳಿತುಕೊಂಡು ವ್ಯಾಪಾರ ವಹಿವಾಟು ನಡೆಸುವ ಬೀದಿ ಬದಿಯ ವ್ಯಾಪಾರಸ್ಥರಿಗೆ ಮಹಾನಗರ ಪಾಲಿಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ ದಯೆ ತೋರಿಸಿದೆ.
ಬೀದಿಬದಿಯ ವ್ಯಾಪಾರಸ್ಥರಿಗೆ ಪಾಲಿಕೆ ನೆರಳಿನ ಆಶ್ರಯ ನೀಡಿದೆ. ಬಳ್ಳಾರಿ ನಗರದ ಡಿಸಿ ಕಚೇರಿ ಮುಂಭಾಗ, ಹಳೆಯ ಹಾಗೂ ಹೊಸ ಬಸ್ ನಿಲ್ದಾಣ, ಕೋರ್ಟ್ ರಸ್ತೆ ಸೇರಿದಂತೆ ಇನ್ನಿತರ ಎಂಟು ಕಡೆಗಳಲ್ಲಿ ಈ ನೆರಳಿನ ಟೆಂಟ್ಗಳನ್ನ ಹಾಕಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಾಗಿದೆ. ಬೀದಿಬದಿಯ ವ್ಯಾಪಾರಸ್ಥರ ಕಾಯ್ದೆ ಅನ್ವಯ ಈ ಬೀದಿ ಬದಿ ವ್ಯಾಪಾರ ವಲಯದ ಹೆಸರಿನಡಿ ಅಂದಾಜು ಎಂಟು ಕಡೆಗಳಲ್ಲಿ ನೆರಳಿನ ಟೆಂಟ್ ಗಳನ್ನ ನಿರ್ಮಿಸಲಾಗಿದೆ.
ಇಷ್ಟುದಿನ ಬಿರುಬಿಸಿಲಿನಲ್ಲೇ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಬೀದಿ ಬದಿಯ ವ್ಯಾಪಾರಸ್ಥರು ಇನ್ಮುಂದೆ ನೆರಳಿನ ಟೆಂಟ್ ಗಳಲ್ಲೇ ಆಶ್ರಯ ಪಡೆಯಲಿದ್ದಾರೆ. ಬೀದಿಬದಿಯ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಕುಳಿತುಕೊಂಡು ವ್ಯಾಪಾರ ವಹಿವಾಟು ನಡೆಸೋದು ತಪ್ಪಲಿದೆ.
ಈ ನೆರಳಿನ ಟೆಂಟ್ಗಳಲ್ಲಿ ಬೀದಿಬದಿಯ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸುವವರಿಗೆ ಯಾವುದೇ ಪ್ರವೇಶಾತಿ ಶುಲ್ಕವಿಲ್ಲ. ಉಚಿತ ಸೇವೆಯಲ್ಲೇ ಈ ಟೆಂಟ್ ಗಳಲ್ಲಿ ಬೀದಿಬದಿಯ ವ್ಯಾಪಾರಸ್ಥರು ವ್ಯಾಪಾರ ಮಾಡಿಕೊಳ್ಳಬಹುದಾಗಿದೆ.
ಈ ಸಂಬಂಧ ಈ ಟಿವಿ ಭಾರತದೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ, ನೆರಳಿನ ಟೆಂಟ್ ಗಳನ್ನ ನಿರ್ಮಾಣ ಮಾಡುವ ಮುಖೇನ ಬೀದಿಬದಿಯ ವ್ಯಾಪಾರಸ್ಥರು ನೆಮ್ಮದಿಯಿಂದ ವ್ಯಾಪಾರ ಮಾಡಿಕೊಳ್ಳಬಹುದು ಎಂದರು.