ಬಳ್ಳಾರಿ: ತಂದೆ-ತಾಯಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ, ಮಕ್ಕಳನ್ನು ಮಾತ್ರ ಸಾಯಿಸಿ ತಾವಿಬ್ಬರು ಬದುಕಿರುವ ಘಟನೆ ಜಿಲ್ಲೆಯ ರಾಮದುರ್ಗದ ಕೆರೆಯಲ್ಲಿ ನಡೆದಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ಕಳೆದ ನಾಲ್ಕೈದು ತಿಂಗಳಿನಿಂದ ಕೂಲಿ ಕೆಲಸ ಇಲ್ಲದೇ, ಮನೆಯಲ್ಲೇ ಕುಳಿತಿದ್ದ ಈ ಕುಟುಂಬಸ್ಥರಿಗೆ ಎದುರಾಗಿದ್ದು ಕಿತ್ತು ತಿನ್ನುವ ಬಡತನ. ಇದೇ ವೇಳೆ ದಂಪತಿ ಹುಷಾರಿಲ್ಲದ ಮಗಳನ್ನು ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇ ಕೋಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದಿದ್ದಾರೆ. ಚಿಕಿತ್ಸೆ ಪಡೆದು ವಾಪಸ್ ಬರುವಾಗ ಮಾರ್ಗಮಧ್ಯೆ ರಾಮದುರ್ಗದ ಕೆರೆಗೆ ಬಂದ ಈ ದಂಪತಿ ತಮ್ಮ ಇಬ್ಬರು ಮಕ್ಕಳನ್ನಿಟ್ಟುಕೊಂಡೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ.
![ತುರ್ತು ವರ್ತಮಾನ ವರದಿ](https://etvbharatimages.akamaized.net/etvbharat/prod-images/kn-bly-4-couple-suicide-attempt-incident-two-baby-death-7203310_12082020163227_1208f_1597230147_946.jpg)
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ನಿವಾಸಿ ಚಿರಂಜೀವಿ ಮತ್ತು ನಂದಿನಿ ಆತ್ಮಹತ್ಯೆಗೆ ಮುಂದಾದ ದಂಪತಿ. ಚಿರಂಜೀವಿ ಮೊದಲಿಗೆ ಇಬ್ಬರು ಮುಗ್ಧ ಕಂದಮ್ಮಗಳನ್ನ ಕೆರೆಯಲ್ಲಿ ಮುಳುಗಿಸುತ್ತಾನೆ. ಖುಷಿ (3), ಚಿರು (1) ಎಂಬ ಮುಗ್ಧ ಮಕ್ಕಳು ರಾಮದುರ್ಗದ ಕೆರೆಯ ನೀರಿಗೆ ಆಹುತಿಯಾಗುತ್ತಾರೆ. ಬಳಿಕ ಭಯಭೀತರಾದ ದಂಪತಿ ನೀನು ಮೊದಲು ಸಾಯಿ.. ನೀನು ಮೊದಲು ಸಾಯಿ ಎಂಬ ತೊಳಲಾಟದಲ್ಲಿಯೇ ಕೆಲಹೊತ್ತು ಕಾಲಕಳೆದಿದ್ದಾರೆ. ಪತಿರಾಯ ಚಿರಂಜೀವಿಗೆ ಥಟ್ಟನೆ ಬೈಕ್ ನೆನಪಾಗಿ, ಬೈಕ್ ತೆಗೆದುಕೊಂಡು ಬರುವುದಾಗಿ ಹೆಂಡತಿಗೆ ಹೇಳಿ ಹೋದವನು ವಾಪಸ್ ಬಂದೇ ಇಲ್ಲ.
![ಬಾಲಕಿ ಖುಷಿ](https://etvbharatimages.akamaized.net/etvbharat/prod-images/8392567_201_8392567_1597231270986.png)
ಇತ್ತ ಹೆತ್ತ ಕಂದಮ್ಮಗಳ ಜೀವಕ್ಕಾಗಿ ಹಾತೊರೆಯುತ್ತಿದ್ದ ನಂದಿನಿ ತಮ್ಮ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲು ಓಡೋಡಿ ಹೋಗಿದ್ದಾರೆ. ಸಾಯಲು ನಿರ್ಧರಿಸಿದ್ದ ಈ ದಂಪತಿಗಳು ಮಾತ್ರ ಇದೀಗ ಜೀವಂತವಾಗಿದ್ದಾರೆ. ಆದರೆ ಈ ಮುಗ್ಧ ಕಂದಮ್ಮಗಳು ಕೆರೆಯ ಪಾಲಾಗಿರೋದು ದುರಾದೃಷ್ಟಕರ.
![ಮೃತ ಬಾಲಕ ಚಿರು](https://etvbharatimages.akamaized.net/etvbharat/prod-images/8392567_549_8392567_1597231328941.png)