ಬಳ್ಳಾರಿ: ತಾಲೂಕಿನ ಇಬ್ರಾಹಿಂಪುರ ಗ್ರಾಮದ ಹೊರವಲಯದ ಶಂಕರಬಂಡೆ ರಸ್ತೆಯಲ್ಲಿರುವ ತನ್ನ ಮೂರು ಎಕರೆ ಭೂಮಿಯನ್ನು ರೈತನೋರ್ವ ಸಾವಯುವ ಕೃಷಿ ಪದ್ಧತಿಗೆ ಪರಿವರ್ತಿಸಿ ಯಶಸ್ವಿಯಾಗಿದ್ದಾರೆ. ಹೌದು, ಇಲ್ಲೋರ್ವ ಯುವ ರೈತ ಕೇವಲ ಕಾಲು ಎಕರೆ ಭೂಮಿಯಲ್ಲಿ ಸೇವಂತಿಗೆ ಹೂವನ್ನು ಬೆಳೆದು ದುಪ್ಪಟ್ಟು ಆದಾಯ ಗಳಿಸುತ್ತಿದ್ದಾರೆ.
ಯುವ ರೈತ ಹನುಮನಗೌಡ, ಈ ಮೊದಲು ತನ್ನ ಮೂರು ಎಕರೆ ಜಮೀನಿಗೆ ಮೂರು ಲಕ್ಷ ರೂ. ಹಣವನ್ನು ವ್ಯಯಿಸಿದರೂ ಕೂಡ ನಿರೀಕ್ಷಿತ ಆದಾಯ ಗಳಿಸಿರಲಿಲ್ಲ. ಭೂಮಿಯ ಫಲವತ್ತತೆ ಕಳೆದು ಹೋಗೋದನ್ನು ಮನಗಂಡ ಇವರು, ಈ ಬಾರಿ ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ.
ತನಗಿರುವ ಆರು ಎಕರೆ ಜಮೀನಿನ ಪೈಕಿ ಸದ್ಯ ಮೂರು ಎಕರೆ ಜಮೀನಿನಲ್ಲಿ ನುಗ್ಗೇಕಾಯಿ ಸೇರಿದಂತೆ ನಾನಾ ತೋಟಗಾರಿಕೆ ಬೆಳೆಗಳ ಜೊತೆ ಜೊತೆಗೆ ಕಾಲು ಎಕರೆ ಭೂಮಿಯಲ್ಲಿ ಈ ಸೇವಂತಿಗೆ ಹೂವನ್ನು ಕೂಡ ಬೆಳೆದಿದ್ದಾರೆ. ಕೇವಲ ಸೇವಂತಿ ಹೂವಿನ ಸಸಿಗೆ 10 ಸಾವಿರ ರೂ. ಗಳವರೆಗೆ ವ್ಯಯ ಮಾಡಿದಷ್ಟೇ ನೆನಪಿರೋದು ಬಿಟ್ಟರೆ, ಅದರ ದುಪ್ಪಟ್ಟು ಆದಾಯ ಗಳಿಕೆಯನ್ನು ನಾನು ಕಂಡಿರುವೆ ಎಂದು ತಿಳಿಸಿದ್ದಾರೆ. ಈವರೆಗೂ ಕೇವಲ 2 ಬಾರಿ ಮಾತ್ರ ಈ ಸೇವಂತಿಗೆ ಹೂವಿನ ಬೆಳೆಯನ್ನು ಕಟಾವು ಮಾಡಲಾಗಿದ್ದು, ಅಂದಾಜು 30,000 ರೂ.ಗಳ ಆದಾಯ ಗಳಿಸುವ ಮೂಲಕ ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಸಸಿ ಬೆಳೆದು ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: ಭಾರತ್ ಬಂದ್: ಇಂದು ಏನಿರುತ್ತೆ, ಏನಿರಲ್ಲಾ?
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ರೈತ ಹನುಮನಗೌಡ, ಸಾವಯುವ ಕೃಷಿ ಪದ್ಧತಿ ನನಗೆ ಬಹಳ ಮೆಚ್ಚುಗೆ ತಂದಿದೆ. ಇದೀಗ ಕೇವಲ ಮೂರು ಎಕರೆ ಭೂಮಿಯಲ್ಲಿ ಮಾತ್ರ ಸಗಣಿ ಗೊಬ್ಬರ ಸೇರಿದಂತೆ ಇನ್ನಿತರೆ ನೈಸರ್ಗಿಕ ಹಾಗೂ ಪ್ರಕೃತಿದತ್ತ ಗೊಬ್ಬರವನ್ನು ಹಾಕಿ ಈ ಬೆಳೆಯನ್ನು ಬೆಳೆಯಲಾಗಿದೆ. ಮುಂಬರುವ ದಿನಗಳಲ್ಲಿ ಉಳಿದ ಮೂರು ಎಕರೆ ಭೂಮಿಯನ್ನೂ ಕೂಡ ಈ ಸಾವಯವ ಕೃಷಿ ಪದ್ಧತಿಗೆ ಪರಿವರ್ತನೆ ಮಾಡುವ ಚಿಂತನೆ ಇದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗಲಿದೆ. ಬೆಳೆಗಳ ಇಳುವರಿ ಕಡಿಮೆಯಾಗಿ ರೈತರು ಅತೀವ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ, ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ನಿರೀಕ್ಷಿತ ಪ್ರಮಾಣದ ಆದಾಯ ಗಳಿಕೆಯ ಜೊತೆಗೆ ಆರೋಗ್ಯಕರ ಜೀವನ ಸಾಗಿಸಲು ಸಹಕಾರಿಯಾಗಲಿದೆ ಎಂದು ಮಾಹಿತಿ ಹಂಚಿಕೊಂಡರು.