ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಮಹಾ ಶಿವರಾತ್ರಿಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಭಕ್ತರು ಮಹಾದೇವನ ದರ್ಶನ ಪಡೆಯುವ ಮೂಲಕ ಕೃಪೆಗೆ ಪಾತ್ರರಾದರು.
ಸರ್.ಎಂ. ವಿಶ್ವೇಶ್ವರಯ್ಯ ನಗರದ ಕಪ್ಪಗಲ್ಲು ರಸ್ತೆಯಲ್ಲಿ ಇರುವ ಶ್ರೀ ಮದ್ದಾನೇಶ್ವರ ದೇವಸ್ಥಾನದಲ್ಲಿ ಭಕ್ತಾರು ಆಗಮಿಸಿ ದೇವರಿಗೆ ಹಣ್ಣು, ಕಾಯಿ, ಕರ್ಪುರ, ದೀಪ ಹಚ್ಚಿ, ಎಡೆ ಇಟ್ಟು ದೇವರಲ್ಲಿ ಬೇಡಿಕೊಂಡರು.
ಇನ್ನು ತಾಲೂಕಿನ ವೇಣಿವೀರಾಪುರ ಬಳಿ ಹನ್ನೆರಡು ಜ್ಯೋರ್ತಿಲಿಂಗಗಳ ದೇಗುಲವಿದ್ದು, ಉತ್ತರ ಭಾರತದ ಕಾಶಿ ವಿಶ್ವನಾಥ, ಸೋಮನಾಥ, ಕೇದಾರನಾಥ ಹಾಗೂ ಅಮರನಾಥ ಸೇರಿದಂತೆ ಹನ್ನೆರಡು ಜ್ಯೋರ್ತಿಲಿಂಗಗಳನ್ನೇ ಹೋಲುವ ಮಾದರಿಯಲ್ಲೇ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇಗುಲದ ವಿಶೇಷತೆ ಅಂದ್ರೆ ಅಂದಾಜು 72 ಅಡಿ ಎತ್ತರದಲ್ಲಿ ಸುಮಾರು 42 ಅಡಿ ಎತ್ತರದ ಈಶ್ವರನ ಮೂರ್ತಿಯು ಚಿನ್ಮುದ್ರೆ ಧಾರೆಯಾಗಿ ಕುಳಿತಿರೋದು ಎಂದು ಈ ದೇಗುಲದ ಪ್ರಧಾನ ಅರ್ಚಕ ಆರ್.ವಿ.ಗುರುದಾಸ ರೆಡ್ಡಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ವಿಶೇಷವಾಗಿ 84 ಜ್ಯೋರ್ತಿಲಿಂಗಗಳ ಶಾಂತಿಯಾತ್ರೆಯನ್ನು ಪ್ರಜಾಪಿತ ಬ್ರಹ್ಮ ಕುಮಾರಿ ಸಂಸ್ಥೆ ಆಯೋಜಿಸಿತ್ತು. 84 ಶಿವಲಿಂಗವನ್ನು ಕಾರಿನ ಮೇಲೆ ಇರಿಸಿ ಶಾಂತಿಯಾತ್ರೆ ಮೆರವಣಿಗೆ ಮಾಡಲಾಯಿತು. ಶಾಂತಿಯಾತ್ರೆಗೆ ಎಂಎಲ್ಸಿ ಕೆ.ಸಿ.ಕೊಂಡಯ್ಯ ಚಾಲನೆ ನೀಡಿದರು.
ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕರಾದ ಬಿ.ಕೆ.ನಿರ್ಮಲಾ ಮಾತನಾಡಿ, ಮಹಾ ಶಿವರಾತ್ರಿಯ ಅಂಗವಾಗಿ ಆಯೋಜಿಸಿರುವ 84 ಜ್ಯೋರ್ತಿಲಿಂಗಗಳ ಶಾಂತಿಯಾತ್ರೆಯ ಪ್ರಮುಖ್ಯತೆ ತಿಳಿಸಿದರು.
ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಶಾಂತಿಯಾತ್ರೆ ಮೆರವಣಿಗೆ ಆರಂಭವಾಗಿ ದುರ್ಗಮ್ಮ ಗುಡಿ, ರಾಯಲ್, ಬ್ರೂಸ್ ಪೇಟೆ, ಮೋತಿ, ಎಸ್.ಪಿ ಸರ್ಕಲ್ ಮಾರ್ಗವಾಗಿ ಸಂಚರಿಸಿತು.