ಬಳ್ಳಾರಿ: ರಾಜ್ಯ ಸರ್ಕಾರ ಬೋಧನಾ ಶುಲ್ಕವನ್ನು ಶೇ. 30ರಷ್ಟು ಇಳಿಕೆ ಮಾಡಿರೋದನ್ನು ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವು ತೀವ್ರವಾಗಿ ಖಂಡಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಬಸವರೆಡ್ಡಿ ಮಾತನಾಡಿ, ಮೊದಲೇ ಖಾಸಗಿ ಶಾಲೆಗಳು ಕೊರೊನಾ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೇವಲ ಖಾಸಗಿ ಶಾಲೆಗಳ ಪ್ರವೇಶಾತಿ ಶುಲ್ಕದ ಪಾವತಿಯಲ್ಲಿ ಶೇ. 30ರಷ್ಟು ಕಡಿತಗೊಳಿಸಿ ಶುಲ್ಕ ಪಾವತಿಗೆ ಅವಕಾಶ ನೀಡಿರೋದು ತರವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕೂಡಲೇ ರಾಜ್ಯ ಸರ್ಕಾರ ಹೊರಡಿಸಿರೋ ಆದೇಶವನ್ನು ಪರಿಶೀಲಿಸಬೇಕು. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಸಡಿಲಗೊಳಿಸಬೇಕು. ಕೋವಿಡ್ ಸಂಕಷ್ಟದಿಂದ ಹೊರ ಬರಲು ವಿಶೇಷ ಅನುದಾನ ನೀಡಬೇಕು. ಹಳೆಯ ಮತ್ತು ಸ್ವಾಭಾವಿಕವಾಗಿ ಬೆಳೆದು ಬಂದಂತಹ ಖಾಸಗಿ ಶಾಲೆಗಳಿಗೆ ಹೊಸ ನಿಯಮಾವಳಿಗಳಿಂದ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿದರು.