ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕಿನಿಂದ 6 ಮಂದಿ ಗುಣಮುಖರಾಗಿದ್ದು, ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಇಂದು ಸಂಜೆ ಬಿಡುಗಡೆ ಮಾಡಲಾಯಿತು.
ಜಿಲ್ಲೆಯಲ್ಲಿಂದು 11 ಕೊರೊನಾ ಕೇಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 181ಕ್ಕೇರಿದೆ. ಇಂದು 6 ಮಂದಿ ಬಿಡುಗಡೆಯಾದವರೂ ಸೇರಿ ಈವರೆಗೆ 55 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 125 ಪ್ರಕರಣಗಳು ಸಕ್ರಿಯವಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ.
ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ವಿವರ:
P-3246, 40 ವರ್ಷದ ಪುರುಷ ಮೂಲತಃ ಹೋಸಪೇಟೆಯವರು. P-4350, 42 ವರ್ಷದ ಪುರುಷ ಮೂಲತಃ ತೋರಣಗಲ್ಲಿನ JSW ಉದ್ಯೋಗಿ ಹಾಗೂ ಸೋಂಕಿತ ವ್ಯಕ್ತಿಯ ಸಂಪರ್ಕಿತರಾಗಿದ್ದಾರೆ. P-5573, 45 ಮಹಿಳೆ ಮೂಲತಃ ಬಳ್ಳಾರಿಯವರಾಗಿದ್ದು, JSW ಉದ್ಯೋಗಿ ಸೋಂಕಿತ ವ್ಯಕ್ತಿಯ ಸಂಪರ್ಕಿತರಾಗಿದ್ದಾರೆ. P-5574, 54 ವರ್ಷದ ಪುರುಷ ಮೂಲತಃ ಕರ್ನೂಲ್ ಜಿಲ್ಲೆಯವರಾಗಿದ್ದು, ಸೋಂಕಿತ ಪ್ರದೇಶದಿಂದ ಚಿಕಿತ್ಸೆಗಾಗಿ ಬಂದವರು. P-5377, 50 ವರ್ಷದ ಪುರುಷ ಮೂಲತಃ ಟಿ.ಬಿ. ಡ್ಯಾಂ ಆರಕ್ಷಕ ವೃತ್ತ ನಿರೀಕ್ಷಕರು. ಕರ್ತವ್ಯ ನಿರ್ವಹಿಸುವಾಗ ಸೋಂಕು ತಗುಲಿದೆ. P-5379, 39 ವರ್ಷದ ಪುರುಷ ಮೂಲತಃ ಬಳ್ಳಾರಿಯವರಾಗಿದ್ದಾರೆ.
ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿ ನಿಂತಿದ್ದವರಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಬಳಿಕ ಕಂದಾಯ ಇಲಾಖೆಯಿಂದ ನೀಡಲಾಗುವ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.
![Ballary corona news](https://etvbharatimages.akamaized.net/etvbharat/prod-images/07:52_kn-bly-5-corona-relief-six-patient-released-7203310_13062020194618_1306f_1592057778_175.jpg)
ನಂತರ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಮಾತನಾಡಿ, ಇವರು ಚಿಕಿತ್ಸೆಗೆ ಬಂದಾಗ ಸಾಕಷ್ಟು ಭಯಗೊಂಡಿದ್ದರು. ಆಗ ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮಸ್ಥೈರ್ಯ ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮ ವಹಿಸಿದೆವು. ಇದೀಗ 6 ಮಂದಿ ಒಂದೇ ಬಾರಿಗೆ ಗುಣಮುಖರಾಗಿರುವುದು ನಮಗೆ ತುಂಬಾ ಸಂತೋಷವಾಗಿದೆ. ಇನ್ನುಳಿದವರನ್ನು ಆದಷ್ಟು ಬೇಗ ಗುಣಮುಖರನ್ನಾಗಿಸಿ ಬಳ್ಳಾರಿಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದರು.
ಗುಣಮುಖರಾಗಿ ಹೊರ ಬಂದವರಲ್ಲಿ ಟಿಬಿ ಡ್ಯಾಂ ಸಿಪಿಐ ಸೇರಿದಂತೆ ಕೆಲವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿಯವರೆಗೆ ವೈದ್ಯಕೀಯ ಸಿಬ್ಬಂದಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ನೀಡುವ ಜೊತೆಗೆ ಆತ್ಮಸ್ಥೈರ್ಯ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿ ವೈರಸ್ ವಿರುದ್ಧ ಹೋರಾಡಲು ಬಲ ತುಂಬಿದರು. ಜೊತೆಗೆ ಗುಣಮಟ್ಟದ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯ ಈ ಕಾರ್ಯಕ್ಕೆ ನಾವು ಎಂದಿಗೂ ಋಣಿಯಾಗಿರುತ್ತೇವೆ ಎನ್ನುವ ಮೂಲಕ ಧನ್ಯವಾದ ತಿಳಿಸಿದರು.