ಬಳ್ಳಾರಿ:ಜಿಲ್ಲೆಯ ಕಂಪ್ಲಿ ತಾಲೂಕಿನ ಜೀರಿಗನೂರು ಗ್ರಾಮದ ಅಪ್ರಾಪ್ತೆಯನ್ನು ಬಳ್ಳಾರಿ ಮೂಲದ 58ರ ವಯೋವೃದ್ಧನೋರ್ವ ವಿವಾಹವಾಗಲು ಮುಂದಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ವೃದ್ಧನಿಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದಾರೆ. ತನ್ನಿಬ್ಬರು ಹೆಂಡತಿಯರಿಗೆ ಗಂಡು ಸಂತಾನದ ಕೊರತೆ ಇರೋದರಿಂದಲೇ 16 ವರ್ಷದ ಅಪ್ರಾಪ್ತೆಯೊಂದಿಗೆ ಹಸೆಮಣೆ ಏರಲು ಈತ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಮೂಲತಃ ಬಳ್ಳಾರಿ ನಗರದ ನಿವಾಸಿಯಾಗಿದ್ದ ಕಿರಾಣಿ ಅಂಗಡಿ ಜಡಿಯಪ್ಪ (58), ಜೀರಿಗಿನೂರು ಗ್ರಾಮದ ಸಮೀಪದ ದೇಗುಲ ಒಂದರಲ್ಲಿ ಅಪ್ರಾಪ್ತೆಯನ್ನ ವಿವಾಹವಾಗಲು ಮುಂದಾಗುತ್ತಿರೋದನ್ನ ಸೂಕ್ಷ್ಮವಾಗಿ ಗಮನಿಸಿದ ಸಾರ್ವಜನಿಕರು ಕೂಡಲೇ 1098 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆಗ ಅಧಿಕಾರಿಗಳಿಗೆ ವಿಷಯ ಗೊತ್ತಾಗಿದೆ. ಕೂಡಲೇ ಕಂಪ್ಲಿ ತಹಶೀಲ್ದಾರ್ ಗೌಸಿಯಾಬೇಗಂ ಮತ್ತು ಸಿಬ್ಬಂದಿ ಸಿನಿಮೀಯ ಮಾದರಿಯಲ್ಲಿ ಮಧ್ಯೆ ರಾತ್ರಿಯೇ ದಾಳಿ ಮಾಡಿ ಬಾಲಕಿಯನ್ನ ರಕ್ಷಿಸಿದ್ದಾರೆ.
ಆರಂಭದಲ್ಲಿ ವಧು- ವರನ ಪೋಷಕರು ಮದುವೆ ತಯಾರಿಗೆ ಒಪ್ಪಲಿಲ್ಲ ಎಂಬ ವಿಚಾರ ಮದುವೆ ಮಾಡಿಸುವ ಮಧ್ಯಸ್ಥಿಕೆ ವಹಿಸಿದ್ದ ಮಹಿಳೆಯನ್ನ ವಿಚಾರಣೆಗೆ ಒಳಪಡಿಸಿದಾಗ ಹೊರಬಿದ್ದಿದೆ. ಸದ್ಯ ಜಡಿಯಪ್ಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ವರ- ವಧುವಿನ ತಂದೆ ತಾಯಿ ಹಾಗೂ ಮಧ್ಯಸ್ಥಿಕೆ ವಹಿಸಿದ್ದ ಮಹಿಳೆಯೊಬ್ಬಳ ಮೇಲೆ ದೂರು ದಾಖಲಾಗಿದೆ.
ಇನ್ನು ವಾರದ ಹಿಂದೆಯೇ ಅಪ್ರಾಪ್ತ ವಧುವಿನ ಪೋಷಕರು ಮದುವೆ ಯತ್ನ ಮಾಡೋದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು ಇದೀಗ ಅಧಿಕಾರಿಗಳನ್ನು ವಂಚಿಸಿದ್ದಾರೆಂಬ ಆರೋಪವಿದೆ.