ಬಳ್ಳಾರಿ : ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಮತ್ತು ಬಿಡಿಡಿಎಸ್ ಚೈಲ್ಡ್ ಲೈನ್ ಇವರ ಸಂಯುಕ್ತ ಆಶ್ರಯದಲ್ಲಿ ದಾಳಿ ಮಾಡಿ 5 ಬಾಲಕಾರ್ಮಿಕ ರಕ್ಷಣೆ ಮಾಡಲಾಯಿತು.
ನಗರದ ಡಾ.ರಾಜ್‌ಕುಮಾರ್ ರಸ್ತೆ, ವಡ್ಡರ ಬಂಡೆ ಹತ್ತಿರದ ಪಂಚರ್ ಶಾಪ್, ಟಿಂಕರಿಂಗ್ ಶಾಪ್, ಗ್ಯಾರೇಜ್, ವುಡ್ ವರ್ಕ್ಸ್ ಶಾಪ್, ಮೆಕ್ಯಾನಿಕ್ ಶಾಪ್ ಮತ್ತು ಇತ್ಯಾದಿ ಅಂಗಡಿಗಳು ಹಾಗೂ ಉದ್ದಿಮೆಗಳ ಮೇಲೆ ಶುಕ್ರವಾರ ಆಕಸ್ಮಿಕ ದಾಳಿ ನಡೆಸಿದ ಈ ತಂಡಗಳು 05 ಬಾಲ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿದವು.
ಆ ಮಕ್ಕಳಲ್ಲಿ 01 ಮಗುವನ್ನು ಪೋಷಕರೊಂದಿಗೆ ಕಳುಹಿಸಿ, ಉಳಿದ 4 ಮಕ್ಕಳನ್ನು ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ದಾಖಲಿಸಲಾಯಿತು. ದಾಳಿ ನಡೆಸಿದ ನಂತರ ಮಾಲೀಕರ ಮೇಲೆ ಕಾರ್ಮಿಕ ಕಾಯ್ದೆಯಡಿಯಲ್ಲಿ ನೋಟಿಸ್ ಜಾರಿ ಮಾಡಲಾಯಿತು ಹಾಗೂ ಅಂಗಡಿ ಮತ್ತು ಉದ್ದಿಮೆ ಮಾಲೀಕರಿಗೆ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ಜಾಗೃತಿ ಮೂಡಿಸಲಾಯಿತು.
ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಕಾರ್ಮಿಕ ನಿರೀಕ್ಷಕ ಎಂ.ರವಿದಾಸ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್, ಕ್ಷೇತ್ರಾಧಿಕಾರಿ ಪಿಎಂ ಈಶ್ವರಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಾಂದ್ ಬಾಷಾ, ಕಾರ್ಮಿಕ ನಿರೀಕ್ಷಕ ಸಿ.ಎನ್ ರಾಜೇಶ್, ತಂಬಾಕು ನಿಯಂತ್ರಣ ಕೋಶ ಸಿಬ್ಬಂದಿ ಭೋಜರಾಜ, ಕಂದಾಯ ನಿರೀಕ್ಷಕ ಎಸ್.ಸುರೇಶ್, ಚೈಲ್ಡ್ ಲೈನ್ ಸಿಬ್ಬಂದಿ ಸಜಿನಿ, ಗ್ರಾಮ ಲೆಕ್ಕಾಧಿಕಾರಿ ಪ್ರಭುಲಿಂಗ ಸೇರಿದಂತೆ ಇತರರು ಇದ್ದರು.