ಬಳ್ಳಾರಿ: ಸುಪ್ರೀಂಕೋರ್ಟ್ ಆದೇಶಾನುಸಾರ ಗಣಿನಗರಿ ಬಳ್ಳಾರಿಯಲ್ಲೇ ಸುಮಾರು 146 ದೇಗುಲಗಳು ಅನಧಿಕೃತವಾಗಿ ತಲೆ ಎತ್ತಿದ್ದು, ಆ ಪೈಕಿ 105 ದೇಗುಲಗಳ ನೆಲಸಮಕ್ಕೆ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ.
ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ. ತುಷಾರಮಣಿ, ಉಪಾಯುಕ್ತ ಸಿ. ಭೀಮಣ್ಣ ನೇತೃತ್ವದ ತಂಡವು ಮಹಾನಗರದ ಆಯಾ ವಾರ್ಡ್ಗಳಲ್ಲಿನ ಉದ್ಯಾನ, ರಸ್ತೆ ಹಾಗೂ ಬೀದಿ ಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿರುವ ದೇಗುಲಗಳ ತೆರವುಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಿದೆ. ಆದ್ರೂ 16 ಪ್ರಮುಖ ದೇಗುಲಗಳ ತೆರವುಗೊಳಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಉಳಿದ 25 ದೇಗುಲಗಳು ಸೂಕ್ತ ದಾಖಲೆ ಹಾಗೂ ಪುರಾವೆಗಳನ್ನು ಮಹಾನಗರ ಪಾಲಿಕೆಗೆ ಸಲ್ಲಿಸಿದ್ದರಿಂದ ಆ ದೇಗುಲಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಿಂಪಡೆಯಲಾಗಿದೆ.
ಮಹಾನಗರದ 16 ಪ್ರಮುಖ ದೇಗುಲಗಳು ಈವರೆಗೂ ಯಾವುದೇ ಪುರಾವೆ ಅಥವಾ ಸೂಕ್ತ ದಾಖಲೆಯನ್ನು ಸಲ್ಲಿಸದ ಕಾರಣ, ಅವುಗಳ ತೆರವು ಕಾರ್ಯಾಚರಣೆ ಮಾತ್ರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಇಂತಿಷ್ಟು ಗಡುವನ್ನು ಕೂಡ ನೀಡಲಾಗಿದೆ. ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಸಮಕ್ಷಮದಲ್ಲಿ ತುರ್ತು ಸಭೆ ಕರೆದು ನಿಗದಿತ ಅವಧಿಯೊಳಗೆ ಸೂಕ್ತ ದಾಖಲೆ ನೀಡದ 16 ದೇಗುಲಗಳ ತೆರವುಗೊಳಿಸುವುದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಮಹಾನಗರ ಪಾಲಿಕೆ ಬಂದಿದೆ.
16 ದೇಗುಲಗಳ ವಿವರ ಹೀಗಿದೆ:
ಬೆಂಗಳೂರು ರಸ್ತೆ ವೇರ್ ಟೌನ್ ಎದುರುಗಡೆ ಮಾಬು ಸುಭಾನಿ ಜಂಡ ಕಟ್ಟೆ, ಕನ್ನಿಕಾ ಪರಮೇಶ್ವರಿ ದೇಗುಲ, ಗಣೇಶ ಕಾಲೊನಿಯ ಹುಲಿಗೆಮ್ಮ ದೇವಿ ದೇಗುಲ, ಬಸವೇಶ್ವರ ನಗರ ವ್ಯಾಪ್ತಿಯ ಸಂಗಮೇಶ್ವರ ಗುಡಿ, ಅಬ್ದುಲ್ ಸಲಾಂ ಬೀದಿ ಜಂಡಾಕಟ್ಟೆ, ಅಕ್ಬರ್ ಮನೆ ಹತ್ತಿರದ ಗಡಂಗ್ ಬೀದಿಯ ಜಂಡಾಕಟ್ಟೆ, ರೈಲ್ವೇ ಹಳಿ ಪಕ್ಕದ ಏಳುಮಕ್ಕಳ ತಾಯಮ್ಮ ಗುಡಿ, ನೇತಾಜಿ ನಗರದ ವಿನಾಯಕ ಗುಡಿ, ಬಳ್ಳಾರಿ ಗುಡ್ಡದ ಇಂಭಾಗದ ಕರಿಮಾರೆಮ್ಮ ಗುಡಿ.
ಬಳ್ಳಾರಿ ಜಿ.ಪಂ. ಎಂಜಿನಿಯರಿಂಗ್ ಕಚೇರಿಯ ಪಕ್ಕದ ಜೈನ ಮಂದಿರ, ಸ್ಪೀನ್ನಿಂಗ್ ಮಿಲ್ ಬಳಿಯ ಪೆಟ್ರೋಲ್ ಬಂಕ್ ಎದುರಿನ ಮಾರೆಮ್ಮ ಗುಡಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯ ಪ್ರಾಚೀನ ಕಾಲದ ಸಂತೋಷಿಮಾ ಗುಡಿ, ಕೋಟೆ ಪ್ರದೇಶ ವ್ಯಾಪ್ತಿಯ ರಸ್ತೆ ಬದಿಯಲ್ಲಿರೊ ಸಾಯಿಬಾಬಾ ಗುಡಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮುಂದಿರುವ ಜೈ ಸಂತೋಷಿ ಮಾ ಗುಡಿ, ಹಳೆ ಧಾರವಾಡ ರಸ್ತೆಯ ಪೀರಲ ದೇವರ ಕಟ್ಟೆ, ಸಿರುಗುಪ್ಪ ರಸ್ತೆಯಲ್ಲಿ ಬಸ್ ಡಿಪೋ ವಿಭಾಗ 1ರ ಮುಂಭಾಗದ ಮಡಿಕೇರಿ ಆಂಜನೇಯ ದೇವಸ್ಥಾನ.
ಬಳ್ಳಾರಿ ತಾಲೂಕಿನಲ್ಲಿ ಹನ್ನೊಂದು ದೇಗುಲಗಳನ್ನು ಗುರುತಿಸಲಾಗಿತ್ತು. ಆ ಪೈಕಿ ಏಳು ದೇಗುಲಗಳ ತೆರವು ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಉಳಿದ ನಾಲ್ಕು ದೇವಸ್ಥಾನಗಳು ದತ್ತಿ ಮತ್ತು ಧಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು. ಆ ನಾಲ್ಕು ದೇಗುಲಗಳ ತೆರವು ಕಾರ್ಯವನ್ನು ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಯು.ನಾಗರಾಜ್ ತಿಳಿಸಿದ್ದಾರೆ.