ಬಳ್ಳಾರಿ: ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗಾಗಿ ಸಾಲ ಪಡೆದುಕೊಂಡಿದ್ದ 2.50 ಲಕ್ಷ ಫಲಾನುಭವಿಗಳು 350 ಕೋಟಿ ರೂ.ಪಾವತಿಸಬೇಕಿದ್ದು, ಕೂಡಲೇ ಪಾವತಿಸುವಂತೆ ಫಲಾನುಭವಿಗಳಿಗೆ ಪತ್ರ ಬರೆದು ತಿಳಿಸಲಾಗುವುದು. ನಂತರ ವಸೂಲಾತಿಗೆ ಕ್ರಮಕೈಗೊಳ್ಳಲಾಗುವುದು ಎಂದು ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ಅವರು ತಿಳಿಸಿದರು
ನಗರದ ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಬಾಕಿ ಹಣ ವಸೂಲಾತಿಗೆ ಮೊದಲು ಪತ್ರ ಮುಖೇನ ಜಾಗೃತಿ ಮೂಡಿಸಿ, ನಂತರ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ನಿಗಮದ ಸಾಲ ನೀಡಿಕೆ ಮಾನದಂಡದಲ್ಲಿ ಬದಲಾವಣೆಯಾಗಲಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೌಶಲ್ಯ ತರಬೇತಿ ಮತ್ತು ಸ್ಕಿಲ್ ಇಂಡಿಯಾ ಅಡಿ ತರಬೇತಿ ಪಡೆದವರಿಗೆ ಮಾತ್ರ ಸಾಲ ನೀಡಲು ಉದ್ದೇಶಿಸಲಾಗಿದೆ ಎಂದರು.
ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿದ ನಂತರ, ಬದುಕು ರೂಪಿಸಿಕೊಳ್ಳಲು ನಿಗಮದ ವತಿಯಿಂದ ಯಂತ್ರೋಪಕರಣಗಳನ್ನು ನೀಡುವ ಚಿಂತನೆಯೂ ಇದೆ.
ಕಳೆದ ವರ್ಷ ನಿಗಮಕ್ಕೆ ಬಜೆಟ್‍ನಲ್ಲಿ 80 ಕೋಟಿ ರೂ. ನೀಡಲಾಗಿತ್ತು. ಈ ವರ್ಷ 500 ಕೋಟಿ ರೂ.ಗಳನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಓದಿ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ 'ಮನೋಹರ' ಉದ್ಯೋಗ ಮೇಳ
ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2013 ರಿಂದ 2020 ರವರೆಗೆ ಚೈತನ್ಯ ಸಾಲ ಯೋಜನೆ ಅಡಿ 1,466, ಚೈತನ್ಯ ಸ್ವಯಂ ಉದ್ಯೋಗ ಯೋಜನೆ ಅಡಿ 2,364, ಸಾಂಪ್ರಾದಾಯಿಕ ಕುಶಲಕರ್ಮಿಗಳ ಯೋಜನೆ ಅಡಿ 2,283, ಕಿರುಸಾಲ ಯೋಜನೆ ಅಡಿ 505, ಅಲೆಮಾರಿ ಜನಾಂಗ 737, ಕುಂಬಾರಿಕೆ 430, ಉಪ್ಪಾರ ಸಮಾಜ 43, ಮಡಿವಾಳ ಸಮಾಜ 35, ಸವಿತಾ ಸಮಾಜ 198, ನೇರ ಅವಧಿ ಸಾಲ 1,540, ಅರಿವು/ಶೈಕ್ಷಣಿಕ ಸಾಲ 232, ಸಾರಾಯಿ ಮಾರಾಟ 78, ಕುರಿ ಸಾಕಾಣಿಕೆ 40 ಫಲಾನುಭವಿಗಳು ಸೇರಿದಂತೆ 10,064 ಜನ ಫಲಾನುಭವಿಗಳಿಗೆ 3,574.57 ಲಕ್ಷ ರೂ. ಸಾಲ ಮಂಜೂರು ಮಾಡಲಾಗಿದೆ. ಈ ಪೈಕಿ 2,100 ಜನರಿಂದ 18.80 ಕೋಟಿ ರೂ.ಬಾಕಿ ಬರಬೇಕಿದೆ ಎಂದರು. ಈ ಸಂದರ್ಭದಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಎಂ.ಭಾವಿಕಟ್ಟಿ, ಮುಖಂಡ ಅಯ್ಯಾಳಿ ತಿಮ್ಮಪ್ಪ ಮತ್ತಿತರರು ಇದ್ದರು.