ಹೊಸಪೇಟೆ(ಬಳ್ಳಾರಿ): ಮರಿಯಮ್ಮನಹಳ್ಳಿಯಲ್ಲಿ ನಡೆದ ವಿಐಪಿ ಮಗನ ಕಾರು ಅಪಘಾತ ಪ್ರಕರಣದ ಘಟನೆಯಲ್ಲಿ ಸಾವಿಗೀಡಾದ ರವಿನಾಯ್ಕ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಫೆಬ್ರವರಿ 10ರಂದು ರವಿನಾಯ್ಕ ಸಾವಿಗೀಡಾಗಿದ್ದ. ನಂತರ ಹಾಸಿಗೆ ಹಿಡಿದಿದ್ದ ಅಜ್ಜಿ ಕೊಟ್ರಿಬಾಯಿ ಕೂಡ ಕೊನೆಯುಸಿರೆಳೆದಿದ್ದಾಳೆ. ಒಂದು ತಿಂಗಳ ಹಿಂದಷ್ಟೇ ಇದೇ ಕುಟುಂಬದ ಮಂಜುನಾಯ್ಕ ಎಂಬುವರು ಅನಾರೋಗ್ಯದ ಹಿನ್ನೆಲೆ ಮೃತರಾಗಿದ್ದರು. 15 ದಿನದ ನಂತರ ರವಿನಾಯ್ಕ(16) ಕಾರು ಅಪಘಾತದಲ್ಲಿ ಮೃತಪಟ್ಟಿದ್ದ. ಈಗ ಅಜ್ಜಿ ಸಾವಿಗೀಡಾದ ಪರಿಣಾಮ ಇವರ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ.
ಸಾವಿನ ಮೇಲೆ ಸಾವುಗಳನ್ನು ಕಂಡ ಈ ಕುಟುಂಬ ಈಗ ಮನೆ ಬಿಡಲು ನಿರ್ಧಾರ ಮಾಡಿದೆ. ಈ ಮನೆಯನ್ನು ಬಿಟ್ಟು ಬೇರೆ ಮನೆಯಲ್ಲಿ ವಾಸ ಮಾಡಲು ಮುಂದಾಗಿದೆ.