ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯ 15 ವಲಯಗಳಲ್ಲಿ(ಜೋನ್)ಅಕ್ಟೋಬರ್ ಮೊದಲ ವಾರದಲ್ಲಿ 24x7 ಗಂಟೆಗಳ ಕಾಲ ಕುಡಿಯುವ ನೀರು ಪೂರೈಕೆಗೆ ಜಿಲ್ಲಾಡಳಿತ ಅಸ್ತು ಎಂದಿದೆ.
ಅಂದಾಜು 15ಕ್ಕೂ ಅಧಿಕ ವಲಯಗಳ ಟ್ಯಾಂಕರ್‌ಗಳನ್ನು ಭರ್ತಿಗೊಳಿಸಿ ದಿನವಿಡೀ ಕುಡಿಯುವ ನೀರನ್ನು ಪೂರೈಕೆ ಮಾಡಲು ಮಹಾನಗರ ಪಾಲಿಕೆ ಸಜ್ಜಾಗಿದೆ. ಖಾಸಗಿ ಕಂಪನಿಯ ಸಹಭಾಗಿತ್ವದ ಅಡಿಯಲ್ಲಿ ಈ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ದಿನದಂದೇ ಬಳ್ಳಾರಿ ನಗರ ಪ್ರದೇಶವು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತ ಆಗಲಿದೆ.
ಬಳ್ಳಾರಿಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸದ್ಯ ನಗರ ಪ್ರದೇಶಕ್ಕೆ ಈ ಕುಡಿಯುವ ನೀರು ಪೂರೈಕೆ ವ್ಯತ್ಯಯದ ಕುರಿತ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಚರ್ಚಿಸಿ, ನೀರು ಪೂರೈಕೆಯ ವಿಧಾನವೇ ಸರಿಯಾಗಿಲ್ಲ. ನೀರು ಗಂಟಿಗಳು ಮನಸೋ ಇಚ್ಛೆಯಂತೆ ನೀರು ಪೂರೈಸುತ್ತಾರೆ. ಅಲ್ಲದೇ, ಟ್ಯಾಂಕರ್‌ಗಳ ಭರ್ತಿ ಬಹುತೇಕ ವಾರ್ಡುಗಳಲ್ಲಿ ನಡೆಯುತ್ತಿಲ್ಲ. ನೇರವಾಗಿ ಆಯಾ ವಾರ್ಡುಗಳಿಗೆ ಈ ನೀರು ಪೂರೈಕೆ ಮಾಡೋದರಿಂದ ಸಮಸ್ಯೆ ಆಗುತ್ತಿದೆ. ಹೀಗಾಗಿ, ಮೊದಲು 24 ಗಂಟೆಯ ನೀರು ಪೂರೈಕೆ ವ್ಯವಸ್ಥೆ ಅನುಷ್ಠಾನಕ್ಕೆ ತರಲಿದ್ದೇವೆ. ನಮ್ಮಲ್ಲಿ ಯಾವುದೇ ನೀರಿನ ಕೊರತೆಯಿಲ್ಲ.
ಶೀಘ್ರವೇ ಈ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಬಳ್ಳಾರಿ ನಗರ ಶಾಸಕರೂ ಕೂಡ ಬಹಳ ಮುತುವರ್ಜಿವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಾಲಿಕೆ ಎಂಜಿನಿಯರ್‌ಗಳ ಸಭೆಯನ್ನೂ ಕೂಡ ನಡೆಸಿದ್ದಾರೆ. ಹೆಚ್ಚುವರಿಯಾಗಿ ಎಂಜಿನಿಯರ್, ಸಿಬ್ಬಂದಿಯನ್ನು ನಿಯೋಜಿಸಲು ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಅಗತ್ಯ ಕ್ರಮ ಕೈಗೊಂಡಿದ್ದಾರೆಂದು ಡಿಸಿ ನಕುಲ್ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಮಾತನಾಡಿ, ಈಗಾಗಲೇ ಹದಿನೈದು ಜೋನ್ಗಳಲ್ಲಿ 24 ಗಂಟೆಯ ನೀರು ಪೂರೈಕೆಗೆ ಸಕಲ ತಯಾರಿ ನಡೆದಿದೆ. ಅಕ್ಟೋಬರ್ 5 ರೊಳಗೆ ಈ 24 ಗಂಟೆಯ ಕುಡಿಯುವ ನೀರು ಪೂರೈಕೆಗೆ ಚಾಲನೆ ದೊರಕುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.