ಬಳ್ಳಾರಿ: ಜಿಲ್ಲೆಯಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ, ವಿಭಿನ್ನ ಹಿರಿಯ ಶ್ರಮ ಜೀವಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಡಾ. ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಚೋರನೂರು ಟಿ. ಕೊಟ್ರಪ್ಪ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಉಳಿಯಬೇಕಾದರೆ ತಾಯಿಂದಿರ ಪಾತ್ರ ಬಹಳ ಮುಖ್ಯ ಎಂದರು.
21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಕೋಳೂರು ಚಂದ್ರಶೇಖರ ಗೌಡ ಮತ್ತು ಕರಡುಕಲ್ ವೀರೇಶ್ ಮಂಡನೆ ಮಾಡಿದರು. ಆಂಧ್ರ ಪ್ರದೇಶದ ಗಡಿಭಾಗದ 70ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯನ್ನು ಇಚ್ಛಾಶಕ್ತಿಯ ಮೂಲಕ ಕರ್ನಾಟಕ ಸರ್ಕಾರ ಉಳಿಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿ ಈ ಭಾಗದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ನೀಡಬೇಕು ಎಂದರು.
ಮಳೆಗಾಲದಲ್ಲಿ ವ್ಯರ್ಥವಾಗುವ ಮಳೆ ನೀರನ್ನು ಇಂಗು ಗುಂಡಿಯ ಮೂಲಕ ಮತ್ತು ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುವ ಮೂಲಕ ಸಂಗ್ರಹಿಸಬೇಕು ಎಂದರು. ಇನ್ನು ಹೆಚ್.ಎಂ.ವೀರಭದ್ರ ಶರ್ಮ, ಪಿ.ಗೀತಾಬಾಯಿ, ಬಸಪ್ಪ ಉಪ್ಪಾರ, ಎಂ.ಅಹಿರಾಜ್, ಚನ್ನವೀರಗೌಡ ಮತ್ತು ಇನ್ನಿತರ ವಿಶೇಷ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.