ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸುಮಾರು 49 ಮಂದಿ ಅಸ್ವಸ್ಥಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಇಲ್ಲಿ ಭಾರೀ ಮಳೆಯಿಂದಾಗಿ ನಲ್ಲಿ ನೀರು ಬರುವ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಈ ನೀರು ಗ್ರಾಮದ ಮನೆಗಳಿಗೆ ಸರಬರಾಜಾಗಿದೆ. ಈ ನಲ್ಲಿ ನೀರು ಕುಡಿದಿರುವುದರಿಂದ ಜನರಿಗೆ ವಾಂತಿ ಬೇಧಿ ಶುರುವಾಗಿದ್ದು, ಜನ ಅಸ್ವಸ್ಥರಾಗಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿರುವ ತಾಲೂಕು ವೈದ್ಯಾಧಿಕಾರಿ ಕುಶಾಲ್ ರಾಜ್ ನೇತೃತ್ವದ ತಂಡವು ಕಲುಷಿತಗೊಂಡಿರುವ ನಲ್ಲಿ ನೀರು ಕುಡಿಯದಂತೆ ಸೂಚಿಸಿದ್ದು, ಟ್ಯಾಂಕರ್ ಮೂಲಕ ಇವರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.
ಗ್ರಾಮದ ಸಮುದಾಯ ಭವನದಲ್ಲಿ ತಾತ್ಕಾಲಿಕ ಆರೋಗ್ಯ ಕ್ಲಿನಿಕ್ ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ ಅಸ್ವಸ್ಥರಾಗಿದ್ದ 21 ಜನರಲ್ಲಿ 5 ಜನರು ಗುಣಮುಖರಾಗಿದ್ದಾರೆ. 11 ಜನರು ಸಂಡೂರು ತಾಲೂಕು ಆಸ್ಪತ್ರೆಯಲ್ಲಿ, ಇಬ್ಬರು ಬಳ್ಳಾರಿ ವಿಮ್ಸ್ ನಲ್ಲಿ ಮತ್ತು ಮೂವರು ಹೊಸಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಮತ್ತಷ್ಟು ಜನರು ಅಸ್ವಸ್ಥರಾಗಿದ್ದು, ಒಟ್ಟೂ 49 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು ಕಲುಷಿತ ನೀರನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಶಾಸಕ ತುಕಾರಾಂ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥಗೊಂಡಿರುವವರ ಆರೋಗ್ಯ ವಿಚಾರಿಸಿದ್ದಾರೆ.
ಓದಿ : ಮುಂಬೈ: ₹1,400 ಕೋಟಿ ಮೌಲ್ಯದ ಮೆಫೆಡ್ರೊನ್ ಡ್ರಗ್ಸ್ ವಶ, ಐವರ ಬಂಧನ