ಬಳ್ಳಾರಿ: ನಗರದ ರೈಲ್ವೆ ನಿಲ್ದಾಣದಿಂದ 1452 ಜನ ಬಿಹಾರಿ ವಲಸಿಗರನ್ನು ಹೊತ್ತ ಶ್ರಮಿಕ ವಿಶೇಷ ರೈಲು ಬಿಹಾರದತ್ತ ಇಂದು ಸಂಜೆ ತೆರಳಿತು. ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್ ಸೇರಿದಂತೆ ಅನೇಕರು ಅವರನ್ನು ಸುರಕ್ಷಿತವಾಗಿ ತಮ್ಮೂರನ್ನು ತಲುಪಿ ಮತ್ತೆ ಬಳ್ಳಾರಿಗೆ ಖುಷಿಯಿಂದ ಬನ್ನಿ ಎಂದು ಶುಭಹಾರೈಸಿ ಬೀಳ್ಕೊಟ್ಟರು.
ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ವಲಸೆ ಬಂದಿದ್ದ ಬಿಹಾರದ 1,452 ಜನ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ಪ್ರಮಾಣಪತ್ರ ವಿತರಿಸಿ ಹಾಗೂ ಅಲ್ಲಿಯೇ 840 ರೂ.ಗಳ ಟಿಕೆಟ್ ನೀಡಿ ರೈಲ್ವೆ ನಿಲ್ದಾಣಕ್ಕೆ ಬಸ್‍ಗಳ ಮೂಲಕ ತಂದು ಬಿಡಲಾಯಿತು. ಅಲ್ಲದೇ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ 2 ಬ್ರೇಡ್ ಪ್ಯಾಕ್, 3 ಲೀ. ನೀರು, 2 ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ ಬಜಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಆಹಾರ ಕಿಟ್‍ಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಿಸಲಾಯಿತು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಬಿಹಾರದ ಸಹಸ್ರಾಗೆ ಈ ರೈಲು ತೆರಳಲಿದ್ದು, 34 ಗಂಟೆಗಳ ಪ್ರಯಾಣದ ಅವಧಿಯಾಗಿರಲಿದೆ. ಮಾರ್ಗ ಮಧ್ಯೆ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಿ ಕಳುಹಿಸಿ ಕೊಡಲಾಗಿದೆ ಎಂದರು.