ಬಳ್ಳಾರಿ : ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದರೂ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅನಗತ್ಯ ಸಂಚರಿಸುತ್ತಿದ್ದ ಅಂದಾಜು 700 ವಾಹನಗಳನ್ನು ಜಪ್ತಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕರ್ಫ್ಯೂನಲ್ಲಿ ರಾಜ್ಯ ಸರ್ಕಾರವು ಸಡಿಲಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿ ಸಮಯವನ್ನ ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಿದೆ.
ಆದರೆ, ಅದನ್ನೇ ನೆಪಮಾಡಿಕೊಂಡ ಉಭಯ ಜಿಲ್ಲೆಗಳ ಸಾರ್ವಜನಿಕರು ಅನಗತ್ಯ ಸಂಚರಿಸುತ್ತಿರೋದು ಬೆಳಕಿಗೆ ಬಂದಾಗ, ನಿನ್ನೆಯ ದಿನ ಪ್ರತಿಯೊಬ್ಬರನ್ನೂ ತಡೆದು ವಿಚಾರಿಸಿದಾಗ ಅನಗತ್ಯ ಕಾರಣವೊಡ್ಡಿ ಸಂಚರಿಸುತ್ತಿರೋದು ಬೆಳಕಿಗೆ ಬಂದಿದೆ. ಹೀಗಾಗಿ, ಮುಲಾಜಿಲ್ಲದೇ ಅವರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಅಗತ್ಯ ವಸ್ತುಗಳ ಖರೀದಿ ಸಲುವಾಗಿಯೇ ಎಪಿಎಂಸಿಯಲ್ಲಿನ ಕೆಲ ಅಂಗಡಿ- ಮುಂಗಟ್ಟು ಹಾಗೂ ಕಿರಾಣಿ ಅಂಗಡಿಗಳಿಗೆ ವ್ಯಾಪಾರ - ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಅದು ಕೂಡ ಎಸ್‌ಒಪಿ ಪ್ರಕಾರವೇ ನಡೆಸಬೇಕೆಂಬ ಕಂಡೀಷನ್ ಇಟ್ಟೇ ಅನುಮತಿ ನೀಡಲಾಗಿದೆ.
ಆದ್ರೇ, ಆ ನಿಯಮಗಳನ್ನ ಉಲ್ಲಂಘನೆ ಮಾಡಿದ ಹಾಗೂ ಅನುಮತಿ ಇರದ ಅಂಗಡಿ- ಮುಂಗಟ್ಟುಗಳನ್ನು ತೆರೆದಿರೋ ಆರೋಪದಡಿ ಸುಮಾರು 11 ಮಂದಿ ಅಂಗಡಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಕೇವಲ ತಳ್ಳುವ ಗಾಡಿಗಳಲ್ಲಿ ತರಕಾರಿ, ಹಣ್ಣು ಸೇರಿದಂತೆ ಇನ್ನಿತರೆ ಆಹಾರ ಪದಾರ್ಥಗಳನ್ನ ಮಾರಾಟ ಮಾಡಲಿಕ್ಕೆ ಅವಕಾಶವನ್ನ ಸಂಜೆ 6 ಗಂಟೆಯವರೆಗೆ ಕಲ್ಪಿಸಲಾಗಿದೆ ಎಂದರು.
ಈಗಲಾದ್ರೂ ಸಾರ್ವಜನಿಕರು ಅರಿತು ಅನಗತ್ಯ ಓಡಾಟಕ್ಕೆ ತಮ್ಮಷ್ಟಕ್ಕೇ ತಾವೇ ಕಡಿವಾಣ ಹಾಕಿಕೊಳ್ಳಿ. ಇಲ್ಲಾಂದ್ರೆ, ಪೊಲೀಸ್ ಇಲಾಖೆಯ ಕಠಿಣ ನಿಯಮಗಳಿಗೆ ಗುರಿಯಾಗಬೇಕಾಗುತ್ತೆ.
ನಾವ್ ನಿಮಗೋಸ್ಕರನೇ ಹಗಲು-ರಾತ್ರಿಯೆನ್ನದೇ ಕಷ್ಟಪಡುತ್ತಿದ್ದೀವಿ. ದಯವಿಟ್ಟು ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಎಂದು ಎಸ್ ಪಿ ಸೈದುಲು ಮನವಿ ಮಾಡಿದ್ದಾರೆ.