ಅಂಜನಾದ್ರಿ ಸಮಗ್ರ ಅಭಿವೃದ್ಧಿಗೆ 15 ದಿನದಲ್ಲಿ ನೀಲನಕ್ಷೆ ಸಿದ್ಧ: ಸಚಿವ ಆನಂದ್ ಸಿಂಗ್ - ಅಂಜನಾದ್ರಿ ಬೆಟ್ಟ ಅಭಿವೃದ್ದಿಯ ಸಮಗ್ರ ಮಾಹಿತಿ
ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ದಿಗಾಗಿ ನೀಲನಕ್ಷೆ ತಯಾರಿಸಲಾಗುತ್ತಿದ್ದು, ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ 100 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ವಿಜಯನಗರ: ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಿಣಿತ ವಾಸ್ತುಶಿಲ್ಪ ತಜ್ಞರಿಂದ 15 ದಿನದೊಳಗೆ ನೀಲನಕ್ಷೆ ಸಿದ್ದಪಡಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಟ್ಟಿದ್ದು, ಆ ಹಣವನ್ನು ಹಂತ-ಹಂತವಾಗಿ ಹಣಕಾಸು ಇಲಾಖೆ ಒದಗಿಸಲಿದೆ. ಇನ್ನೂ ಹೆಚ್ಚಿನ ಹಣ ಅವಶ್ಯವಿದ್ದಲ್ಲಿ ಸರಕಾರ ಒದಗಿಸಲಿದೆ ಎಂದು ತಿಳಿಸಿದರು. ಜುಲೈ 20 ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಟ್ಟಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದೂ ಹೇಳಿದರು.
ಭೂಸ್ವಾಧೀನಕ್ಕೆ ರೈತರ ಒಪ್ಪಿಗೆ: ಅಂಜನಾದ್ರಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೆಟ್ಟದ ಸುತ್ತಮುತ್ತಲಿನ 62 ಎಕರೆ ರೈತರ ಜಮೀನಿನ ಭೂಸ್ವಾಧೀನ ನಡೆಯಲಿದೆ. ಅಂಜನೇಯನ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ರೈತರು ಜಮೀನು ನೀಡಲು ಮುಂದೆ ಬಂದಿದ್ದಾರೆ. ರೈತರಿಗೆ ಪ್ರತಿ ಎಕರೆ ಜಮೀನಿಗೆ ಗರಿಷ್ಠ 42 ಲಕ್ಷ ರೂ. ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದಲೂ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ಸಚಿವ ಆನಂದ ಸಿಂಗ್ ಮಾಹಿತಿ ನೀಡಿದರು.
ಇದನ್ನೂ ಓದಿ: ಪ್ರತಿಕೂಲ ಹವಾಮಾನ: ಮತ್ತೆ ಸ್ಥಗಿತಗೊಂಡ ಅಮರನಾಥ ಯಾತ್ರೆ