ಬಳ್ಳಾರಿ : ಅಗ್ನಿ ಅವಘಡಗಳು ಸಂಭವಿಸಿದರೆ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನ ಸಮೇತ ತೆರಳಿ ಬೆಂಕಿ ನಂದಿಸುತ್ತಾರೆ. ಆದರೆ, ಅಗ್ನಿಶಾಮಕ ಠಾಣೆಗೂ ಮತ್ತು ಅಗ್ನಿ ಸಂಭವಿಸಿದ ಸ್ಥಳಕ್ಕೂ ಅಂತರ ಹೆಚ್ಚಿದ್ದರೆ ಅಗ್ನಿ ಹರಡಿ ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತದೆ. ಹಾಗಾಗಿ, ಜಿಲ್ಲೆಯಲ್ಲಿ ಹೆಚ್ಚಿನ ಅಗ್ನಿಶಾಮಕ ಠಾಣೆಗಳ ಅಗತ್ಯವಿದೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸುಮಾರು ಹತ್ತು ಅಗ್ನಿಶಾಮಕ ಠಾಣೆ ಕಾರ್ಯ ನಿರ್ವಹಿಸುತ್ತಿವೆ. ಇನ್ನೂ ಎರಡು ಠಾಣೆಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಪ್ರಸ್ತಾವನೆ : ಬಳ್ಳಾರಿ ನಗರ ಹೊರವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಹಾಗೂ ಕಂಪ್ಲಿ ತಾಲೂಕಿನಲ್ಲಿ ತಲಾ ಒಂದರಂತೆ 2 ಅಗ್ನಿಶಾಮಕ ದಳದ ಠಾಣೆಗಳನ್ನು ಸ್ಥಾಪನೆ ಮಾಡಲು ಪ್ರಸ್ತಾವನೆಯೊಂದು ಈಗ ರಾಜ್ಯ ಸರ್ಕಾರದ ಮುಂದಿದೆ.
ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಬೇಕಿದೆ ಅಗ್ನಿಶಾಮಕ ಠಾಣೆ : ಬಳ್ಳಾರಿ ನಗರ ಹೊರವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ಮಾಡಬೇಕಿದೆ. ಬಿರುಬೇಸಿಗೆ ವೇಳೆಯಲ್ಲಿ ಬಹಳಷ್ಟು ಅಗ್ನಿ ಅವಘಡಗಳು ಸಂಭವಿಸುತ್ತಿರುವುದರಿಂದ ಹೊಸದಾಗಿ ಅಗ್ನಿಶಾಮಕ ಠಾಣೆ ಸ್ಥಾಪನೆ ಮಾಡಲೇಬೇಕಾಗಿದೆ.
ಕಂಪ್ಲಿ ತಾಲೂಕಿನಲ್ಲಿ ಸ್ಥಾಪನೆಯಾಗಬೇಕಿದೆ ಅಗ್ನಿಶಾಮಕ ಠಾಣೆ : ಕಂಪ್ಲಿ ತಾಲೂಕಿನಲ್ಲೊಂದು ಅಗ್ನಿಶಾಮಕ ಠಾಣೆ ಸ್ಥಾಪಿಸಲು ಬಹುಬೇಡಿಕೆ ಇದೆ. ಕಂಪ್ಲಿಯ ಯಾವುದೇ ಭಾಗದಲ್ಲೂ ಕೂಡ ಅಗ್ನಿ ಅವಘಡಗಳು ಸಂಭವಿಸಿದಾಗ ಕುರುಗೋಡು ಅಥವಾ ಬಳ್ಳಾರಿ ತಾಲೂಕಿನ ಅಗ್ನಿಶಾಮಕ ದಳ ಠಾಣೆಗಳಿಂದಲೇ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ಕರೆದೊಯ್ಯಬೇಕಾದ ಸನ್ನಿವೇಶವಿದೆ. ಹಾಗಾಗಿ, ಅಲ್ಲೊಂದು ಅಗ್ನಿಶಾಮಕ ಠಾಣೆ ಸ್ಥಾಪಿಸುವ ಬೇಡಿಕೆ ಬಹುದಿನಗಳಿಂದಲೂ ಕೇಳಿ ಬರುತ್ತಿದೆ.
ಸಂಭವಿಸಿದ ಅಗ್ನಿ ಅವಘಡಗಳೆಷ್ಟು?: ಕಳೆದ 2019- 20 ನೇ ಸಾಲಿನಲ್ಲಿ ಅಂದಾಜು 814 ಅಗ್ನಿ ಅವಘಡ ಸಂಭವಿಸಿವೆ. ಆ ಪೈಕಿ 59 ರಕ್ಷಣಾ ಕರೆಗಳನ್ನು ಸ್ವೀಕರಿಸಲಾಗಿದೆ. ಸುಮಾರು 62 ಮಂದಿಯನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಲಾಗಿದೆ. 38 ಮಂದಿಯ ಪ್ರಾಣ ಹಾನಿ ಉಂಟಾಗಿದೆ. ಒಂದು ಜಾನುವಾರು ಸಾವನ್ನಪ್ಪಿದೆ.
ಅಗ್ನಿ ಅವಘಡದಿಂದಾದ ನಷ್ಟವೆಷ್ಟು?: 19,00,60,100 ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ. 4,02,99,500 ರೂ. ಮೌಲ್ಯದ ಆಸ್ತಿಗೆ ಹಾನಿ ಉಂಟಾಗಿದೆ. 14,97,60,600 ರೂ. ಮೊತ್ತದ ಆಸ್ತಿಯನ್ನು ರಕ್ಷಣೆ ಮಾಡಿ ಈ ಬೆಂಕಿ ಅವಘಡದಿಂದ ಉಳಿಸಲಾಗಿದೆಂದು ಜಿಲ್ಲಾ ಅಗ್ನಿ ಶಾಮಕದಳದ ಅಧಿಕಾರಿ ಕೆ. ತಿಮ್ಮಾರೆಡ್ಡಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಸಾಲಿನ ಅಗ್ನಿ ಅವಘಡಗಳು : ಪ್ರಸಕ್ತ ಸಾಲಿನ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಅಂದಾಜು 165 ಅಗ್ನಿ ಅವಘಡಕ್ಕೆ ಸಂಬಂಧಪಟ್ಟ ಕರೆಗಳನ್ನು ಸ್ವೀಕರಿಸಿಸಲಾಗಿದೆ. ನಾಲ್ವರನ್ನು ರಕ್ಷಣೆ ಮಾಡಲಾಗಿದೆ.
ಮೂವರ ಪ್ರಾಣ ಹಾನಿ ಸಂಭವಿಸಿದೆ. 2,88,67,000 ರೂ. ಮೊತ್ತದ ಆಸ್ತಿ ಮೇಲೆ ಅಗ್ನಿ ಅವಘಡ ಸಂಭವಿಸಿದೆ. 5,42,2500 ರೂ. ಮೊತ್ತದ ಆಸ್ತಿಗೆ ಹಾನಿ ಉಂಟಾಗಿದ್ದು, 2,34,44,500 ಮೊತ್ತದ ಆಸ್ತಿ ರಕ್ಷಿಸಲಾಗಿದೆ.
ಇದನ್ನೂ ಓದಿ: ಮಂಗಳೂರು: ಸಂಕಷ್ಟದಲ್ಲಿದೆ ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ
ಇನ್ನೂ ಎರಡು ಅಗ್ನಿಶಾಮಕ ಠಾಣೆಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.