ಚಿಕ್ಕೋಡಿ : ಈಜು ಬಾರದೆ ನೀರಲ್ಲಿ ಮುಳುಗುತ್ತಿದ್ದ ಮೂವರು ಯುವಕರು ಮತ್ತು ಯುವತಿರಿಬ್ಬರನ್ನು ಕಾಪಾಡಿ ಯುವಕರಿಬ್ಬರು ಮಾನವೀಯತೆ ಮೆರೆದಿರುವ ಘಟನೆ ಸದಲಗಾ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದಲ್ಲಿ ಹರಿಯುತ್ತಿರುವ ದೂಧಗಂಗಾ ನದಿಯಲ್ಲಿ ಇಬ್ಬರು ಯುವತಿಯರು ಮತ್ತು ಮೂವರು ಯುವಕರು ನೀರಾಟವಾಡಲು ತೆರಳಿದ್ದಾರೆ. ಈಜು ಬಾರದೆ ನೀರಲ್ಲಿ ಮುಳಗುತ್ತಿದ್ದ ಆ ಐವರನ್ನು ನಿಪ್ಪಾಣಿ ತಾಲೂಕಿನ ಮಾಣಕಾಪೂರ ಗ್ರಾಮದ ನಿವಾಸಿಗಳಾದ ಅಮೋಲ ಚೌಗಲೆ ಮತ್ತು ಸಂದೀಪ ಬನ್ನೆ ಎಂಬ ಇಬ್ಬರು ಯುವಕರು 20 ಅಡಿ ಎತ್ತರದಿಂದ ನದಿಗೆ ಹಾರಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪಳುನ್ನಿಂದ ಚಿಕ್ಕೋಡಿ ತಾಲೂಕಿನ ಕರೋಶಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಯುವಕ-ಯುವತಿಯರು ಆಗಮಿಸಿದ್ದರು. ಇಚಲಕರಂಜಿಗೆ ಬಟ್ಟೆ ಖರೀದಿಗಾಗಿ ತೆರಳುವಾಗ ಮಾರ್ಗ ಮಧ್ಯದಲ್ಲಿ ಸದಲಗಾ ಪಟ್ಟಣದ ಬಳಿಯಲ್ಲಿ ತುಂಬಿ ಹರಿಯುತ್ತಿರುವ ನದಿಯಲ್ಲಿ ನೀರಾಟವಾಡಲು ತೆರಳಿದ್ದಾರೆ. ಈಜು ಬಾರದ ಹಿನ್ನೆಲೆ ಆಶೀಯಾನಾ, ಮೈನುದ್ದೀನ, ಆಲಿಯಾ ಮಾಂಡೇಕರ, ಜುನೇದ ಶೇಖ್ ಸೇರಿದಂತೆ ಐವರು ನೀರಿನಲ್ಲಿ ಮುಳುಗುತ್ತಿದ್ದರು.
ಅಮೋಲ ಚೌಗಲೆ ಮತ್ತು ಸಂದೀಪ ಬನ್ನೆ ಇದೇ ಮಾರ್ಗವಾಗಿ ತೆರಳುವಾಗ ಯುವಕ ಯುವತಿಯರ ಚೀರಾಟ-ಕೂಗಾಟ ಕೇಳಿ ಬೈಕ್ ನಿಲ್ಲಿಸಿ 20 ಅಡಿ ಎತ್ತರದಿಂದ ನದಿಗೆ ಹಾರಿ ಐವರನ್ನು ರಕ್ಷಣೆ ಮಾಡಿ ಸಾಹಸ ಮೆರೆದಿದ್ದಾರೆ. ರಕ್ಷಣೆ ಮಾಡಿದ ಐವರ ಪೈಕಿ ಓರ್ವ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಮಹಾರಾಷ್ಟ್ರದ ಇಚಲಕರಂಜಿ ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.