ಬೆಳಗಾವಿ : ಜಿಲ್ಲೆಯ ಮುಗುಳಿಹಾಳ ಗ್ರಾಮದಲ್ಲಿ ಗಣೇಶ ನಿಮಜ್ಜನ ವೇಳೆ ಯುವಕನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಸೇರಿ ನಾಲ್ವರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗುಳಿಹಾಳ ಗ್ರಾಮದಲ್ಲಿ ಅರ್ಜುನಗೌಡ ಪಾಟೀಲ್(21) ಎಂಬ ಯುವಕನನ್ನು ಹತ್ಯೆ ಮಾಡಲಾಗಿತ್ತು. ಇತ್ತ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉದಯ್ ಭನದ್ರೋಲಿ(21), ಸುಭಾಷ್ ಸೋಲನ್ನವರ್(21), ವಿಠ್ಠಲ ಮೀಸಿ(20) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ : ಕೊಲೆಯಾದ ಅರ್ಜುನಗೌಡ ಪಾಟೀಲ ಬಿಎಸ್ಸಿ ಪದವೀಧರರನಾಗಿದ್ದಾನೆ. ಕೊಲೆ ಮಾಡಿದ ಉದಯ್ ಸೇರಿ ಆತನ ಸ್ನೇಹಿತರು ಅರ್ಜುನಗೌಡನಿಗೆ ಪರಿಚಿತರಾಗಿದ್ದು, ಒಂದೇ ಗ್ರಾಮದವರಾಗಿದ್ದಾರೆ. ಮೃತ ಅರ್ಜುನ್ ಗೌಡ ಮತ್ತು ಉದಯ್ ನಡುವೆ ಕ್ಷುಲ್ಲಕ ಕಾರಣಕ್ಕೆ ಹಲವು ಬಾರಿ ಗಲಾಟೆ ನಡೆದಿರುವುದಾಗಿ ಹೇಳಲಾಗಿದೆ. ಆಗ ಇಬ್ಬರಿಗೂ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ.
ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರೂ ಯುವಕರು ? : ಈ ಇಬ್ಬರು ಯುವಕರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರಂತೆ. ಕಾಲೇಜಿನಿಂದ ಮರಳಿ ಊರಿಗೆ ಬರುವಾಗ ಆಕೆಗೆ ಬಸ್ ನಲ್ಲಿ ಸೀಟ್ ಹಿಡಿಯಲು ಪರಸ್ಪರ ದುಂಬಾಲು ಬೀಳುತ್ತಿದ್ದರಂತೆ. ಈ ವಿಷಯವಾಗಿಯೇ ಇಬ್ಬರ ನಡುವೆ ಗಲಾಟೆ ನಡೆದಿದೆ ಹೇಳಲಾಗಿದೆ.
ಒಂದು ಬಾರಿ ಅರ್ಜುನಗೌಡ್ ಹಿಡಿದಿರುವ ಬಸ್ ನ ಸೀಟ್ ನಲ್ಲಿ ಉದಯ್ ಬಂದು ಕುಳಿತುಕೊಂಡಿದ್ದು, ಇದು ಇಬ್ಬರ ನಡುವೆ ವೈಷಮ್ಯಕ್ಕೆ ಕಾರಣವಾಗಿತ್ತು. ಆಗ ಗ್ರಾಮಸ್ಥರ ಪಂಚಾಯಿತಿಯಲ್ಲಿ ಇಬ್ಬರ ಗಲಾಟೆ ಬಗೆಹರಿದಿತ್ತು. ಆದರೂ ಅಂದಿನಿಂದಲೂ ಇಬ್ಬರ ನಡುವೆ ಆಗಾಗ ಸಣ್ಣಪುಟ್ಟ ವಿಷಯಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗ್ತಿದೆ.
ಇಲ್ಲಿನ ಗಣೇಶ ನಿಮಜ್ಜನ ಸಂದರ್ಭದಲ್ಲಿ ಅರ್ಜುನ್ ಗೌಡನನ್ನು ಮುಗಿಸಲು ಉದಯ್ ಮತ್ತು ಆತನ ಸ್ನೇಹಿತರು ಯೋಜನೆ ರೂಪಿಸಿದ್ದಾರೆ. ಅಂತೆಯೇ ಉದಯ್ ಅರ್ಜುನಗೌಡ್‌ನ ಮೇಲೆ ದಾಳಿ ಮಾಡಿ, ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರ್ಜುನ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ಇದನ್ನೂ ಓದಿ : ಮಂಡ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ