ಬೆಳಗಾವಿ : ಪಿಎಂ ಮೋದಿ ಹುಟ್ಟುಹಬ್ಬದ ದಿನವನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರ ನೇತೃತ್ವದಲ್ಲಿ ಕೈ ಕಾರ್ಯಕರ್ತರು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಿ ಪ್ರತಿಭಟಿಸಿದರು.
ಗೋಕಾಕ್ ನಗರದ ಬಸವೇಶ್ವರ ಸರ್ಕಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿಯೇ ಪಕೋಡಾ (ಮಿರ್ಚಿ, ಬಜ್ಜಿ) ತಯಾರಿಸಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ನೀಡದೆ ಪ್ರಧಾನಿಯಿಂದ ಮೋಸ : ನಂತರ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಸುಳ್ಳು ಭರವಸೆ ನೀಡಿ ಯುವಕರಿಗೆ ಮೋಸ ಮಾಡಿದ್ದಾರೆ. ಉದ್ಯೋಗ ನೀಡುವುದು ಒಂದು ಕಡೆ ಇರಲಿ, ಇವರ ಆಡಳಿತದ ಅವಧಿಯಲ್ಲಿ ದೇಶಾದ್ಯಂತ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಆಡಳಿತದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ದೇಶಕ್ಕೆ ಉಪಯೋಗವಾಗುವ ಯಾವ ಯೋಜನೆಯೂ ಜಾರಿಯಾಗಿಲ್ಲ. ಮೋದಿ ತಮ್ಮ ಏಳೂವರೆ ವರ್ಷದ ಆಡಳಿತದಲ್ಲಿ ಯುವಕರಿಗೆ ನೆರವಾಗುವ ಯಾವುದೇ ಕ್ರಮಕೈಗೊಂಡಿಲ್ಲ.
ಕೇಂದ್ರ ಸರ್ಕಾರ ಕೂಡಲೇ ಯುವಕರಿಗೆ ಉದ್ಯೋಗಗಳನ್ನು ನೀಡಬೇಕು. ಬೇರೆ ಬೇರೆ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪ್ರಯಾಣಿಕರೇ ಗಮನಿಸಿ.. ಶನಿವಾರದಿಂದಲೇ ವೇಳಾಪಟ್ಟಿಯಲ್ಲಿ ಬದಲಾವಣೆ..