ಬೆಳಗಾವಿ: ಪ್ರೇಯಸಿಯು ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಪ್ರಿಯಕರನೇ ಕತ್ತು ಬಿಗಿದು ಕೊಲೆಗೈದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಸವ ಕಾಲೋನಿಯಲ್ಲಿ ನಡೆದಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಗ್ರಾಮದ ರಾಮಚಂದ್ರ ತೆಣಗಿ (29) ಎಂಬಾತ ತಾನು ಪ್ರೀತಿಸುತ್ತಿದ್ದ ರೇಣುಕಾ ಎಂಬುವಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ರೇಣುಕಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಮಚಂದ್ರ ತೆಣಗಿ ರಾಜ್ಯಶಾಸ್ತ್ರದಲ್ಲಿ ಉನ್ನತ ಪದವಿ ವ್ಯಾಸಂಗ ಮಾಡುತ್ತಿದ್ದ. ಕೊಲೆಯಾದ ರೇಣುಕಾ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರಿಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ರೇಣುಕಾ ತನ್ನನ್ನು ಮರೆತುಬಿಡು ಇದೊಂದು ಕೆಟ್ಟ ಕನಸು ಅಂತಾ ಹೇಳಿ ಬ್ರೇಕ್ ಅಪ್ ಮಾಡಿಕೊಂಡಿದ್ದಳಂತೆ.
ಇದರಿಂದ ಆಘಾತಗೊಂಡಿದ್ದ ರಾಮಚಂದ್ರ ಮನೆಯಲ್ಲಿ ಒಪ್ಪಿಸಿ ಮದುವೆ ಆಗೋಣ ಅಂತಾ ಹೇಳಿದ್ದನಂತೆ. ಆದ್ರೆ, ಇದಕ್ಕೆ ಒಪ್ಪದ ರೇಣುಕಾ ಬೇಡ ಅಂದಿದ್ದಳಂತೆ. ಹೀಗಾಗಿ ರಾಮಚಂದ್ರ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದು, ಗುರುವಾರ ರಾತ್ರಿ ಆಕೆಯ ಇರುತ್ತಿದ್ದ ಬಸವ ಕಾಲೋನಿಯಲ್ಲಿನ ಬಾಡಿಗೆ ಮನೆಗೆ ಬಂದಿದ್ದಾನೆ. ಈ ವೇಳೆ ಆತ ತಂದಿದ್ದ ಸ್ಕಿಪ್ಪಿಂಗ್ ವೈರ್ನಿಂದ ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ತಾನು ಅದೇ ವೈರ್ನಿಂದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಯುವಕನ ಡೆತ್ನೋಟ್ ಸಿಕ್ಕಿದೆ. ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಯುವಕನ ತಂದೆ ರಾಮಚಂದ್ರ ತೆಣಗಿ ಮಾತನಾಡಿ, ನನ್ನ ಮಗ ಏನೂ ಹೇಳಿರಲಿಲ್ಲ. ಈ ಬಗ್ಗೆ ನಮಗೆ ತಿಳಿಸಿದ್ದರೆ ಏನಾದರೂ ನಿರ್ಧಾರ ಮಾಡಬಹುದಿತ್ತು. ಮಂಗಳವಾರವಷ್ಟೇ ಊರಿನಿಂದ ಬೆಳಗಾವಿಗೆ ಬಂದಿದ್ದ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಉನ್ನತ ಪದವಿ ವ್ಯಾಸಂಗ ಮಾಡುತ್ತಿದ್ದ. ಈಗಾಗಲೇ ಎಎಸ್ಐ ದೈಹಿಕ ಪರೀಕ್ಷೆ ಪಾಸ್ ಮಾಡಿಕೊಂಡಿದ್ದು, ಲಿಖಿತ ಪರೀಕ್ಷೆಯ ತಯಾರಿ ನಡೆಸಿದ್ದ. ಸಾವನ್ನಪ್ಪಿದ ಹುಡುಗಿ ಕೂಡ ನಮ್ಮದೇ ಸಮಯದಾಯದವಳು, ಅವಳಾದರೂ ನಮ್ಮ ಬಳಿ ಹೇಳಬಹುದಿತ್ತು ಎಂದು ಕಣ್ಣೀರಿಟ್ಟರು. ಸದ್ಯ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಕರು ಇಳಿಮುಖ; ಮಾನಸಿಕ ಖಿನ್ನತೆಯಿಂದ IIT ವಿದ್ಯಾರ್ಥಿ ಆತ್ಮಹತ್ಯೆ