ಬೆಳಗಾವಿ: ಯೋಗದಿಂದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಆದ್ದರಿಂದ ಯೋಗಾಭ್ಯಾಸವನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತರ ಆಶ್ರಯದಲ್ಲಿ ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ "ವಸುದೈವ ಕುಟುಂಬಕಂ” ಹಾಗೂ “ಪ್ರತಿ ಅಂಗಳದಲ್ಲಿ ಯೋಗ” ಎಂಬ ಘೋಷವಾಕ್ಯದಡಿ ಯೋಗ ನಡಿಗೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವ ಯೋಗ ದಿನಕ್ಕೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೆಸರು ತಂದು ಕೊಟ್ಟಿದ್ದು ಭಾರತ ಮತ್ತು ಭಾರತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಹೀಗಾಗಿ ನಾಳೆಯ ಯೋಗ ದಿನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇಂದು ಯೋಗ ನಡಿಗೆ ಮಾಡುತ್ತಿದ್ದೇವೆ. ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯದ ಮಾರ್ಗವಾಗಿ ಒಪ್ಪಿಕೊಳ್ಳಲಾಗಿದೆ. ದೈನಂದಿನ ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಒತ್ತಡ ನಿವಾರಣೆ ಕೂಡ ಇದರಿಂದ ಸಾಧ್ಯವಾಗಲಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾದ ಯೋಗ ನಡಿಗೆಯು ಚೆನ್ನಮ್ಮ ವೃತ್ತದ ಮೂಲಕ ಸಾಗಿ ಜಿಲ್ಲಾ ಪಂಚಾಯತಿ ಕಾರ್ಯಾಲಯ ತಲುಪಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯೋಗದ ಮಹತ್ವ, ಉಪಯೋಗದ ಬಗ್ಗೆ ಅರಿವು ಮೂಡಿಸುವ ಸಂದೇಶ ಫಲಕಗಳನ್ನು ಪ್ರದರ್ಶಿಸಲಾಯಿತು. ಈ ವೇಳೆ ಅಪರ ಜಿಲ್ಲಾಧಿಕಾರಿಗಳಾದ ಕೆ.ಟಿ. ಶಾಂತಲಾ, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿಗಳಾದ ಡಾ. ಶ್ರೀಕಾಂತ್ ಸುಣಧೋಳಿ ಹಾಗೂ ಮಹಿಳೆಯರು, ವಿವಿಧ ಇಲಾಖೆಯ ಅಧಿಕಾರಿಗಳು ನಡಿಗೆಯಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಮೋದಿ ಯೋಗ ದಿನಾಚರಣೆ.. ವಿಶ್ವಾದ್ಯಂತ ಅತ್ಯುತ್ಸಾಹ.. ಆಚರಣೆಗೆ ಕ್ಷಣಗಣನೆ!
ನಾಳೆ ಅಂತಾರಾಷ್ಟ್ರೀಯ ಯೋಗ ದಿನ: ಜಾಗತಿಕವಾಗಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಯೋಗಾಭ್ಯಾಸದ ಮೂಲಕ ಯೋಗದಿಂದ ಹೇಗೆ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯಬಹುದು ಎಂಬ ಕುರಿತಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಯೋಗ ಕಾರ್ಯಕ್ರಮ, ವರ್ಕ್ಶಾಪ್, ಟಾಕ್ಸ್ ಮತ್ತು ಸಂಸ್ಕೃತಿ ಪ್ರದರ್ಶನಗಳು ಜಾಗತ್ತಿನೆಲ್ಲೆಡೆ ನಡೆಯುತ್ತವೆ.ಯೋಗವು ದೇಹದ ಅಂಗಾಂಗದ ಸರಾಗ ಚಲನೆ, ಬಲ ಮತ್ತು ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಆಸನಗಳು ಕೀಲಿನ ಸಾಮರ್ಥ್ಯ ಹೆಚ್ಚಿಸಿ, ಸ್ನಾಯುವನ್ನು ಬಲಗೊಳಿಸುತ್ತದೆ. ನಿಯಮಿತ ಯೋಗಾಭ್ಯಾಸ ನಿಮ್ಮ ನಿದ್ದೆಯನ್ನು ಉತ್ತಮಗೊಳಿಸುತ್ತದೆ. ಇದು ಸಕಾರಾತ್ಮಕ ಚಿಂತನೆಗೆ ಪ್ರೋತ್ಸಾಹ ನೀಡಿ, ಒತ್ತಡ ತಗ್ಗಿಸುತ್ತದೆ. ಸ್ವಯಂ ಅರಿವು ಹೆಚ್ಚಿಸುತ್ತದೆ. ಮನೆಯಲ್ಲಿ ಸುಲಭವಾಗಿ ಮಾಡುವ ಈ ಯೋಗಾಭ್ಯಾಸಗಳು ನಿಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಒಟ್ಟಾರೆ ಯೋಗಕ್ಷೇಮದ ಪರಿಣಾಮ ಬೀರುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. ಈ ಕಾರ್ಯಕ್ರಮದ ಬಗ್ಗೆ ವಿಶ್ವದಾದ್ಯಂತ ರಾಜತಾಂತ್ರಿಕರು ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ತೀರಾ ಉತ್ಸಾಹದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ತಿಳಿಸಿದ್ದಾರೆ.