ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದರು.
ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಲು ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಮುಂಬೈಗೆ ತೆರಳಲು ರಮೇಶ್ ಜಾರಕಿಹೊಳಿ ಗೋಕಾಕ್ನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಯಡಿಯೂರಪ್ಪ ಬರುತ್ತಿರುವ ವಿಷಯ ತಿಳಿದು ರಮೇಶ್ ಜಾರಕಿಹೊಳಿ ವಿಮಾನ ನಿಲ್ದಾಣದ ವೇಟಿಂಗ್ ರೂಂನಲ್ಲಿ ಕಾಂಗ್ರೆಸ್ ಮುಖಂಡ ಶಿವಕಾಂತ ಸಿದ್ನಾಳ ಜತೆಗೆ ಚರ್ಚೆ ನಡೆಸಿದರು. ಈ ವೇಳೆ ಮಾಧ್ಯಮಗಳ ಕ್ಯಾಮರಾ ಕಂಡ ತಕ್ಷಣ ಕೈ ಮುಗಿದು ರಮೇಶ್ ಹೊರ ನಡೆದರು.
ಸಿಎಂ ಸ್ವಾಗತಕ್ಕೆ ಆಗಮಿಸಿದ್ದ ಬಿಜೆಪಿ ಮುಖಂಡರೊಂದಿಗೆ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದರು. ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಹಾಗೂ ರಮೇಶ್ ಜಾರಕಿಹೊಳಿ ಮುಖಾಮುಖಿಯಾಗಿ ಉಭಯ ಕುಶಲೋಪರಿ ನಡೆಸಿದರು. ಬಳಿಕ ರಮೇಶ್ ಮುಂಬೈಗೆ ಹಾರಿದರು. ಸಿಎಂ ರಾಮದುರ್ಗ ಪ್ರವಾಸ ಕೈಗೊಂಡರು.