ಚಿಕ್ಕೋಡಿ: ಡಿಸೆಂಬರ್ 16ರಂದು ಯಮಕನಮರಡಿಯಲ್ಲಿ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯ ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಜೈನ ಬಸದಿಯ ಬಳಿ ಡಿ.16ರಂದು ರಾತ್ರಿ ಭರಮಾ ದುಬದಾಳಿ ಎಂಬಾತ ಗೆಳೆಯರೊಂದಿಗೆ ಮಾತನಾಡುತ್ತಾ ಕುಳಿತಾಗ ಗುಂಡಿನ ದಾಳಿ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ನಾದ ಗ್ರಾಮದ ಗಣಪತಿ ಕಾಲನಿಯ ವಿನಾಯಕ ಸೋಮಶೇಖರ ಹೊರಕೇರಿ (26)ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದರು, ಇಂದು ಬಂಧಿಸಿದ್ದಾರೆ.
ಓದಿ : ಬೆಳಗಾವಿ: ಗುಂಡು ಹಾರಿಸಿ ವ್ಯಕ್ತಿಯ ಕೊಲೆ ಯತ್ನ
ದಾಳಿಗೆ ಕಾರಣವೇನು..? ಆರೋಪಿ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಹುಡುಗಿಯ ದೂರದ ಸಂಬಂಧಿಯಾಗಿದ್ದ ಭರಮಾ ದುಪದಾಳಿ ಆಕೆಗೆ ಇನ್ನೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಆರೋಪಿ ವಿನಾಯಕ, ನನ್ನ ಪ್ರೀತಿಗೆ ಅಡ್ಡ ಬಂದಿದ್ದಾನೆ ಎಂದು ಭರಮಾ ದುಪದಾಳಿಯನ್ನು ಕೊಲೆ ಮಾಡಲು ಗುಂಡಿನ ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.