ಚಿಕ್ಕೋಡಿ : ರಾಜ ಮಹಾರಾಜರ ಕಾಲದಿಂದ ಬಳುವಳಿ ಆಗಿ ಬಂದಿರುವ ಅಪರೂಪದ ದೇಶಿ ಕಲೆ ನಶಿಸಿ ಹೋಗುತ್ತಿರುವ ಕಾಲದಲ್ಲಿ ಕುಸ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿ ಅಭಿವೃದ್ಧಿ ಪಡಿಸುತ್ತಿರುವುದರಲ್ಲಿ ಕರ್ನಾಟಕದ ಪಾಲು ಕೂಡ ಮಹತ್ವದ್ದಾಗಿದ್ದು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಮೂಲಕ ಅಥಣಿ ಪಟ್ಟಣ ತನ್ನದೇ ಆದ ಕೊಡುಗೆ ಕೊಟ್ಟಿದೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಶ್ರೀ ದಡ್ಡಿ ಸಿದ್ದೇಶ್ವರ ಜಾತ್ರೆ ನಿಮಿತ್ತ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳನ್ನು ಅಥಣಿ ಪಟ್ಟಣದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕುಸ್ತಿ ಪಂದ್ಯಾವಳಿಯಲ್ಲಿ ಪೈಲ್ವಾನರಾದ ಕಾರ್ತಿಕ ಕಾಟೆ, ಆನಂದ ಲಮಾಣಿ, ಬೀರಪ್ಪ ಅಥಣಿ, ವಿಕ್ರಮ ದಿಲ್ಲಿ, ಸಂದೀಪ ಕಾಶಿದ, ಅಬುಬಕರ ಮಾಸಾಳ, ವಿಕಾಸ ಪಾಟೀಲ, ತುಕಾರಾಂ ಅಥಣಿ, ಅಮಗೊಂಡ ಮಖಣಾಪೂರ, ಹೊಳೆಬಸು ಹೆಬ್ಬಾಳ, ಬಸು ಮಸರಗುಪ್ಪಿ, ಅಮೂಲ ದೇವಖಾತೆ, ಅಮೀತ ದಿಲ್ಲಿ ಹಾಗೂ ಪ್ರವೀಣ ಸಾಂಗಲಿ ಭಾಗವಹಿಸಿದ್ದು, ಪಂದ್ಯಾವಳಿಯ ವೇಳೆ ತಮ್ಮ ಪಟ್ಟುಗಳನ್ನು ಪ್ರದರ್ಶಿಸಿ ನೋಡುಗರನ್ನು ಮನರಂಜಿಸಿದ್ದಾರೆ.
ಒಟ್ಟಾರೆಯಾಗಿ ದೇಶಿ ಕ್ರಿಡೆಯಾದ ಕುಸ್ತಿ ಪಂದ್ಯಾವಳಿ ಮೈ ನವಿರೇಳಿಸುವಂತೆ ನಡೆದಿದ್ದು, ನೋಡುಗರು ಕುಸ್ತಿ ಪಂದ್ಯವನ್ನು ಕಣ್ಣು ತುಂಬಿಕೊಂಡು ಗೆದ್ದ ಪೈಲ್ವಾನರ ಜೊತೆ ಪೋಟೊ ತೆಗೆದುಕೊಳ್ಳಲು ಮುಂದಾಗುತ್ತಿರುವುದು ಹೆಚ್ಚುತ್ತಿರುವ ಕುಸ್ತಿಯ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.