ಚಿಕ್ಕೋಡಿ: ಎಲ್ಲೆಂದರಲ್ಲಿ ತಗ್ಗು ಗುಂಡಿಗಳು, ಮಳೆ ಬಂದರೆ ಸಾಕು ಚರಂಡಿಯಾಗುವ ರಸ್ತೆಗಳು... ಇವು ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಮೃತ್ಯುಕೋಪವಾಗಿವೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಹುತೇಕ ಗ್ರಾಮ ಹಾಗೂ ಪಟ್ಟಣಗಳ ರಸ್ತೆಗಳ ಪರಿಸ್ಥಿತಿಯು ಮೇಲಿನಂತಿದೆ. ಎಲ್ಲಿ ನೋಡಿದರು ರಸ್ತೆ ಗುಂಡಿಗಳು. ರಸ್ತೆ ಪಕ್ಕದ ಜಮೀನಿನ ಬೆಳೆಗಳ ಮೇಲೆ ಧೂಳು- ಧೂಳು. ಇಂತಹ ತಗ್ಗು ಗುಂಡಿಗಳ ನಡುವಿಯೇ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ನಿತ್ಯ ಪ್ರಯಾಣಿಸಬೇಕಿದೆ.
ರಸ್ತೆಗಳ ಮೇಲಿನ ಗುಂಡಿಗಳನ್ನ ತಪ್ಪಿಸಲು ಸಾಕಷ್ಟು ವಾಹನ ಸವಾರರು ಅಪಘಾತಗಳಿಗೆ ತುತ್ತಾಗಿದ್ದಾರೆ. ಗುಂಡಿಗಳನ್ನು ಸರಿಪಡಿಸುವಂತೆ ಜನರು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ರಸ್ತೆಗಳನ್ನು ದುರಸ್ತಿ ಮಾಡದ ಕಾರಣ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ. ರಸ್ತೆಯಿಂದ ಉಂಟಾಗುವ ಧೂಳು ಪಕ್ಕದ ಜಮೀನುಗಳಲ್ಲಿರುವ ಬೆಳೆಗಳ ಮೇಲೆ ಹರಡಿಕೊಂಡು ಸರಿಯಾಗಿ ಫಸಲು ಬರುತ್ತಿಲ್ಲ. ಕೆಲವು ಕಡೆ ಸಾಕಷ್ಟು ಬೆಳೆ ನಾಶವಾಗಿದೆ. ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಶಾಸಕರನ್ನು ಆಗ್ರಹಿಸಿದ್ದರು ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಭೀಮಾ ಹಣಕುಪ್ಪೆ.
ರೈತ ಮಲ್ಲಪ್ಪ ಗುಂಡುಮಾಳಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ನಿಮಗೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಒಮ್ಮೆ ಗೆದ್ದು ಬಂದ ಮೇಲೆ ಈ ಕಡೆ ಮತ್ತೆ ವಾಪಸ್ ಬರುವುದಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಸರ್ಕಾರದಿಂದ ಅನುದಾನ ತಂದು ಜನರಿಗೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿಕೊಡಲಿ ಎಂದರು.
ಈ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ. ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿವೆ. ಇದು ದ್ವಿಚಕ್ರ ಸೇರಿದಂತೆ ಆಟೊ, ಕಾರು, ಸೈಕಲ್, ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ. ಮಳೆ ಬಂದರಂತೂ ವಾಹನ ಸವಾರರ ಪಾಡು ದೇವರಿಗೆ ಪ್ರೀತಿ ಎಂಬಂತಾಗುತ್ತದೆ.