ಬೆಳಗಾವಿ: ನಿರ್ಮಾಣ ಹಂತದ ಕಟ್ಟಡದ ಪಕ್ಕದ ಮನೆಯ ಗೋಡೆ ಕುಸಿದು ಕಟ್ಟಡ ಕಾರ್ಮಿಕನೋರ್ವ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಮಾರುತಿ ಗಲ್ಲಿಯ ಮಾರುತಿ ಮಂದಿರದ ಹಿಂಭಾಗದಲ್ಲಿ ಗುರುವಾರ ಸಂಭವಿಸಿದೆ.
ಕಟ್ಟಡದ ಪಕ್ಕದ ಮನೆಯ ಗೋಡೆ ಕುಸಿದ ಹಿನ್ನೆಲೆಯಲ್ಲಿ ಮಣ್ಣಿನಡಿ ಸಿಲುಕಿ ಕಾರ್ಮಿಕ ಬೈಲಹೊಂಗಲದ ಮಹಾದೇವಪ್ಪ ಎಂಬಾತ ಮೃತಪಟ್ಟಿದ್ದಾನೆ. ಇನ್ನೊಬ್ಬ ಕಾರ್ಮಿಕನಿಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಖಡೇಬಜಾರ್ ಎಸಿಪಿ ಚಂದ್ರಪ್ಪ, ಸಿಪಿಐ ನಿಂಬಾಳ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಡಿಆರ್ಎಫ್ ತಂಡದವರು ದೌಡಾಯಿಸಿ ಕಾರ್ಯಾಚರಣೆ ನಡೆಸಿ, ಮೃತದೇಹ ಹೊರಗೆ ತೆಗೆದಿದ್ದಾರೆ. ಕೀರ್ತಿಲಾಲ್ ಎಂಬುವರು ಇಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಮಾಧ್ಯಮದವರ ಜೊತೆ ಮಾತನಾಡಿದ ಪಾಲಿಕೆ ಸದಸ್ಯ ಜಯತೀರ್ಥ ಸವದತ್ತಿ, ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇಸ್‍ಮೆಂಟ್ ಮಾಡಿ ಕಟ್ಟಡ ಕಟ್ಟುವುದು ತಪ್ಪು. ಯಾಕೆಂದರೆ ಪಕ್ಕದಲ್ಲಿ ಮಣ್ಣಿನ, ಕಲ್ಲಿನ ಗೋಡೆಯ ಮನೆಗಳಿರುತ್ತವೆ ಎಂಬುದನ್ನು ನೋಡಬೇಕಿತ್ತು. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಎಲ್ಲದರ ಪರಿಶೀಲನೆ ಮಾಡಬೇಕು. ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸಬಾರದು. ಶವವನ್ನು ಮೃತರ ಮನೆಗೆ ಕಳಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಗೋಕಾಕ: 9 ತಿಂಗಳ ಹಿಂದೆ ನಡೆದ ಯುವಕನ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು